-By Narayan Bhat

articles -ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಮತ್ತು ಪ್ರಾಧ್ಯಾಪಕರುಗಳಿಗೆ ಕಾರ್ಯಭಾರ ಹಂಚಿಕೆಯ ಬಗೆಗೆ ಕಾಲೇಜು ಶಿಕ್ಷಣ ಆಯುಕ್ತರ ಕಛೇರಿಯಿಂದ ಬಂದ ಸುತ್ತೋಲೆಗೆ ಪ್ರತಿಕ್ರೀಯೆ

ನಮ್ಮ ದೇಶದಲ್ಲಿ ಮೂಲಭೂತ ವಿಜ್ಞಾನದ ವಿಷಯದಲ್ಲಿ ನಡೆಯುತ್ತಿರುವ ಸಂಶೋಧನೆಯ ಗುಣಮಟ್ಟ ನಿರೀಕ್ಷೆಯ ಮಟ್ಟದಲ್ಲಿ ನಡೆಯುತ್ತಿಲ್ಲ ಎಂಬ ಅಭಿಪ್ರಾಯ ಹಲವು ವೇದಿಕೆಗಳಲ್ಲಿ ವ್ಯಕ್ತವಾಗುತ್ತಿದೆ. ಯಸ್.ಯಸ್.ಯಲ್.ಸಿ ವರೆಗಿನ ಯಾವುದೇ ವಿದ್ಯಾರ್ಥಿಯಲ್ಲಿ ಕೇಳಿದರೂ ಅವರ ಮುಂದಿನ ಉದ್ದೇಶ ಪಿ.ಯು.ಸಿಯಲ್ಲಿ ವಿಜ್ಞಾನವನ್ನು ಅಧ್ಯಯನ ಮಾಡುವುದೇ ಆಗಿರುತ್ತದೆ. ವಿಜ್ಞಾನದಲ್ಲಿರುವ ಈ ಆಸಕ್ತಿಯ ಹಿಂದಿರುವ ಉದ್ದೇಶ ಮುಂದೆ ಎಂಜಿನಿಯರಿಂಗ್ ಅಥವಾ ಮೆಡಿಕಲ್ ಕಾಲೇಜಿಗೆ ಸೇರುವುದೇ ವಿನಹ ಮುಂದೆ ವಿಜ್ಞಾನವನ್ನು ಅಧ್ಯಯನ ಮಾಡುವುದಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ.

ಪದವಿ ತರಗತಿಗಳಿಗೆ ಮೂಲಭೂತ ವಿಜ್ಞಾನದ ವಿಷಯಗಳನ್ನು ಬಯಸಿ ಬರುವ ಹೆಚ್ಚಿನ  ವಿದ್ಯಾರ್ಥಿಗಳೂ  ಯಾವುದೇ ಕಾರಣಕ್ಕೂ ಯಾವುದೇ ರೀತಿಯಲ್ಲಿಯೂ ಎಂಜಿನಿಯರಿಂಗ್ ಅಥವಾ ಮೆಡಿಕಲ್ ಕಾಲೇಜಿಗೆ ಪ್ರವೇಶ ಪಡೆಯಲು ವಿಫಲರಾದವರು.  ಇದರಿಂದಾಗಿ ಪದವಿ ತರಗತಿಗಳಿಗೆ ಮೂಲಭೂತ ವಿಜ್ಞಾನದ ವಿಷಯಗಳನ್ನು ಬಯಸಿ ಬರುವ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಗುಣಮಟ್ಟದಲ್ಲಿ ಈಗಾಗಲೇ ಗಣನೀಯವಾಗಿ ಕೆಳಗಿಳಿದಿರುತ್ತದೆ.ಸಹಜವಾಗಿಯೇ ವಿಜ್ಞಾನ ಕ್ಷೇತ್ರದ ಸಂಶೋಧನೆಗಳ ಗುಣಮಟ್ಟವೂ ಕೆಳಗಿಳಿದಿರುತ್ತದೆ.

   ಈ ನಿಟ್ಟಿನಲ್ಲಿ ಪದವಿ ಕಾಲೇಜುಗಳಿಗೆ ಬರುವ ವಿದ್ಯಾರ್ತಿಗಳಿಗೆ ಮೂಲಭೂತ ವಿಜ್ಞಾನದ ಬಗೆಗೆ ಆಸಕ್ತಿಯನ್ನು ಮೂಡಿಸಬೇಕಾದರೆ ಅವರಿಗೆ ಪಿ.ಯು.ಸಿಯಲ್ಲಿ ಕಲಿತ ವಿಚಾರಗಳನ್ನು ಪುನರಾವರ್ತನೆ ಮಾಡಿ ಅದರ ಮುಂದುವರಿಕೆಯನ್ನು ಮನದಟ್ಟು ಮಾಡಬೇಕಾಗತ್ತದೆ. ತರಗತಿಗಳಲ್ಲಿ ಅವರು ಕಲಿತ ವಿಷಯಗಳನ್ನು ಪ್ರಯೋಗಾಲಯಗಳಲ್ಲಿ ಉಪನ್ಯಾಸಕರ ಮಾರ್ಗದರ್ಶನದಂತೆ ಮಾಡಿ ಮನನ ಮಾಡಿಕೊಳ್ಳಬೇಕಾಗುತ್ತದೆ. ಇದರಿಂದಾಗಿ ಪ್ರಯೋಗಾಲಯದಲ್ಲಿ ಉಪನ್ಯಾಸಕರ ಮಾರ್ಗದರ್ಶನ ತರಗತಿಗಳಲ್ಲಿ ನಡೆಸುವ ಭೋಧನೆಗಿಂತಲೂ ಹೆಚ್ಚು ಮಹತ್ವದ್ದಾಗಿರುತ್ತದೆ. ಇವುಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಈ ವರೆಗೆ ಪ್ರಯೋಗಾಲಯದ ಕರ್ತವ್ಯ ಮತ್ತು ಭೋಧನಾ ಕರ್ತವ್ಯದ ಮಧ್ಯ ಯಾವುದೇ ವ್ಯತ್ಯಾಸವನ್ನು ತಾರದೆಯೇ ಒಟ್ಟು ಕಾರ್ಯಭಾರವನ್ನು ನಿಗದಿಪಡಿಸಲಾಗುತಿತ್ತು. ಹಾಗಿದ್ದರೂ ವಿಜ್ಞಾನೇತರ ವಿಷಯಗಳಿಗೆ ಹೋಲಿಸಿದರೆ ವಿಜ್ಞಾನ ವಿಷಯಗಳ ಉಪನ್ಯಾಸಕರಿಗೆ ಈಗಾಗಲೇ ವಾರಕ್ಕೆ 20 ಘಂಟೆಗಳ ಒಟ್ಟು ಕಾರ್ಯಭಾರವನ್ನು ನಿಗದಿಪಡಿಸಲಾಗಿತ್ತು.

    ಇತ್ತೀಚೆಗೆ ಸರಕಾರೀ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯ ಬಗೆಗೆ ನೀಡಿರುವ ಸುತ್ತೋಲೆಯು ಈ ಎಲ್ಲಾ ಆಶಯಗಳಿಗೆ ವಿರುದ್ದವಾಗಿದ್ದಂತೆ ಅನಿಸುತ್ತದೆ. ಈ ಸುತ್ತೋಲೆಯ ಧ್ವನಿಯ ಪ್ರಕಾರ ಪ್ರಯೋಗಾಲದ 2 ಘಂಟೆಯ ಅವಧಿ ತರಗತಿಯ ಭೋಧನೆಯ 1 ಘಂಟೆಯ ಅವಧಿಗೆ ಸಮಾನ ಎಂಬ ಅರ್ಥ ಬರುತ್ತದೆ. ಒಬ್ಬ ಉಪನ್ಯಾಸ 40 ಘಂಟೆಗಳಷ್ಟು ಕಾಲ ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರೆ ಮಾತ್ರ ಆತ 20 ಘಂಟೆಗಳ ಕಾಲ ಕೆಲಸ ಮಾಡಿದಂತೆ. ಇದು ತೀರಾ ಅವೈಜ್ಷಾನಿಕವಾಗಿ ಕಾಣಿಸುತ್ತದೆ. ವಿಜ್ಞಾನದ ವಿಷಯಗಳ ಪ್ರಯೋಗಾಲಯದ  ತರಬೇತಿ ಉಳಿದ  ತರಗತಿಗಳಷ್ಟೇ ಪ್ರಾಮುಖ್ಯವಾಗಿದ್ದು ಮತ್ತು ಪ್ರಯೋಗಾಲಯದ ಪ್ರಯೋಗಗಳು ತರಗತಿಯ ಮುಂದುವರಿಕೆಯ ಭಾಗಗಳಾಗಿವೆ. ಉಪನ್ಯಾಸಕರು ತರಗತಿಯಲ್ಲಿ ಕಲಿಸಿದ ವಿಚಾರಗಳಿಗೆ ಅನುಗುಣವಾಗಿ ಪ್ರಯೋಗಗಳನ್ನು  ನಿಗದಿಗೊಳಿಸ ನೀಡಬೇಕಾಗುತ್ತದೆ. ಅವರು ಪ್ರಯೋಗವನ್ನು ನಡೆಸುತ್ತಿರವ ವಿಧಾನ ಸರಿಯಾಗಿದೆಯೇ ಎಂದು ಪರಿಶೀಲಿಸಬೇಕಾಗುತ್ತದೆ. ಅವರಿಗೆ ದೊರಕಿದ ಫಲಿತಾಂಶ ಸರಿಯಾಗಿದೆಯೇ ಎಂದು ಪರಿಶೀಲಿಸಬೇಕಾಗುತ್ತದೆ.  ನಿರ್ದಿಷ್ಟ ಪ್ರಯೋಗ ನಿರೀಕ್ಷಿತ ಫಲಿತಾಂಶ ನೀಡದಿದ್ದಾಗ ವಿದ್ಯಾರ್ತಿ  ಮಾಡಿದ ತಪ್ಪುಗಳನ್ನು ಪತ್ತೆ ಹಚ್ಚಲು ಅಥವಾ ಉಪಕರಣಗಳಲ್ಲಿರುವ ತೊಂದರೆಗಳನ್ನು ಪರಿಹರಿಸಲು ಅನೇಕ ಬಾರಿ ಹೆಣಗಬೇಕಾಗುತ್ತದೆ. ಬೌದ್ದಿಕ ನೆಲೆಯಲ್ಲಿ ನಡೆಯಬೇಕಾದ ಇಂತಹ ಪಯಾಯೋಗಿಕ ತರಗತಿಗಳನ್ನು ವಾರದಲ್ಲಿ 32 ಘಂಟೆಗಳ ನಢೆಸುವುದು  ಸಾಧ್ಯವೇ , ನಡೆಸಿದಲ್ಲೆ ಅದರ ಗುಣಮಟ್ಟ ಹೇಗಿರಬಹುದು ಎಂಬುದರ ಬಗೆಗೆ ವಿಮರ್ಶೆ ಅತ್ಯಗತ್ಯ.

ಇಷ್ಟಾಗಿಯೂ ಮುಂದೊಂದು ದಿನ ಇದೇ  ಆದೇಶದ ಆಧಾರದಲ್ಲಿ ಪ್ರಾಯೋಗಿಕ ಕಾರ್ಯಭಾರ ಹಂಚಿಕೆ ಮಾಡಿದರೆ ಹೆಚ್ಚಿನ ಎಲ್ಲಾ ಕಾಲೇಜುಗಳಲ್ಲಿ ಕೇವಲ ಒಬ್ಬ ಉಪನ್ಯಾಸಕ ಸಂಪೂರ್ಣ ವಿಭಾಗವನ್ನು ನಿಭಾಯಿಸಬೇಕಾಗಬಹುದು ಮತ್ತು ಅದರೊಂದಿಗೆ ಪದವಿ ಕಾಲೇಜುಗಳಲ್ಲಿರುವ ಮೂಲ ವಿಜ್ಞಾನದ ತರಗತಿಗಳನ್ನು ಶಾಶ್ವತವಾಗಿ ಕೊನೆಗಾಣಿಸಬಹುದು.