-ರಾಜೀವ ಹೆಗಡೆ

ರಾಜ್ಯದಲ್ಲಿ ಸುಮಾರು 16 ಸಾವಿರ ಶಿಕ್ಷಕರ ಕೊರತೆ ! ಹೈ.ಕ. ಭಾಗದ 1635
ರಾಜ್ಯ ಸರ್ಕಾರ ಅನುಮತಿ ನೀಡಿದರೆ ಸದ್ಯದಲ್ಲಿಯೇ 2345 ಶಿಕ್ಷಕರ ಹುದ್ದೆಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ. ಇದಲ್ಲದೇ ಖಾಲಿ ಉಳಿದಿರುವ ಇತರ ಹುದ್ದೆಗಳಿಗೂ ಹಂತಹಂತವಾಗಿ ಪ್ರವೇಶ ಪ್ರಕ್ರಿಯೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಾತ್ವಿಕ ಒಪ್ಪಿಗೆ ನೀಡಿದ್ದಾರೆ.


ಹೈದ್ರಾಬಾದ್ - ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವ ಕಾರಣದಿಂದ ಕಳೆದ ಶೈಕ್ಷಣಿಕ ವರ್ಷದಲ್ಲಿ 4 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಆ ಬಳಿಕ ರಾಜ್ಯದ ಉಳಿದ ಭಾಗಗಳಲ್ಲಿ ನೇಮಕ ಪ್ರಕ್ರಿಯೆ ನಡೆಸಲು ಹಿಂದಿನ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಆಸಕ್ತಿ ತೋರಿದ್ದರೂ ಚುನಾವಣೆ ನೀತಿ ಸಂಹಿತೆ ಕಾರಣದಿಂದ ತಡೆ ಹಿಡಿಯಲಾಗಿತ್ತು.
ಮತ್ತೊಂದೆಡೆ ರಾಜ್ಯದಲ್ಲಿ ಸುಮಾರು 16 ಸಾವಿರ ಶಿಕ್ಷಕರ ಕೊರತೆಯಿದೆ ಎಂಬ ಮಾಹಿತಿಯಿದೆ. ಖಾಲಿ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲು ರಾಜ್ಯ ಸರ್ಕಾರ ಒಲವು ತೋರಿದೆ. ಪ್ರತಿ ವರ್ಷ ಒಂದಷ್ಟು ಸಾವಿರ ಶಿಕ್ಷಕರನ್ನು ಇಲಾಖೆಗೆ ಸೇರಿಸಿಕೊಳ್ಳಲು ಸಿಎಂ ಕೂಡ ಆಸಕ್ತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಪ್ರಕ್ರಿಯೆ ಮುಗಿಯುವವರೆಗೂ 4 ಸಾವಿರ ಅತಿಥಿ ಶಿಕ್ಷಕರನ್ನು ಕಳೆದ ವರ್ಷದಂತೆಯೇ ನೇಮಿಸಿಕೊಳ್ಳಲು ಆಯಾ ಶಾಲೆಯ ಮುಖ್ಯೋಪಾಧ್ಯಾಯರಿಗೆ ಇಲಾಖೆ ಅನುಮತಿ ನೀಡಿದೆ.
ಅನುಮತಿ ನೀಡಿದರೆ ನೇಮಕ ಪ್ರಾರಂಭ: ಈಗ ಹೈದ್ರಾಬಾದ್- ಕರ್ನಾಟಕ ಭಾಗದ 1635 ಹುದ್ದೆಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳ 2345 ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ರಾಜ್ಯ ಸರ್ಕಾರ ಹಾಗೂ ಕಾನೂನು ಇಲಾಖೆಯ ಅಭಿಪ್ರಾಯ ಕೇಳಿದೆ.
ಮೂಲಗಳ ಪ್ರಕಾರ ಕಾನೂನು ಇಲಾಖೆಯು ಈ ಬಗ್ಗೆ ಸಕಾರಾತ್ಮಕ ಧೋರಣೆ ಹೊಂದಿದ್ದು, ಅನುಮತಿ ನೀಡಲು ಒಲವು ತೋರಿಸಿದೆ. ಈ ಬಗ್ಗೆ ಎಲ್ಲ ಜನಪ್ರತಿನಿಧಿಗಳು ಹಾಗೂ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಇನ್ನೆರಡು ವಾರದಲ್ಲಿ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.
ಹೈದ್ರಾಬಾದ್- ಕರ್ನಾಟಕ ಭಾಗದ ನೇಮಕ ಪ್ರಕ್ರಿಯೆ ಸ್ಥಗಿತಗೊಳಿಸಬೇಕು. ವಿಶೇಷ ಸ್ಥಾನಮಾನ ಜಾರಿಗೆ ಬಂದ ಬಳಿಕವೇ ಮೀಸಲು ಕ್ರಮದ ಆಧಾರದ ಮೇಲೆ ನೇಮಕ ಪ್ರಕ್ರಿಯೆ ನಡೆಸಬೇಕು ಎಂದು ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಾಗಿತ್ತು. ಇದನ್ನು ಆಧರಿಸಿ ಮುಖ್ಯ ಕಾರ್ಯದರ್ಶಿಗಳು 4 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆಗೆ ತಡೆ ನೀಡಿದ್ದರು. ಆದರೆ ಶಿಕ್ಷಕರ ಕೊರತೆಯಿಂದ ಶೈಕ್ಷಣಿಕ ಚಟುವಟಿಕೆ ಮೇಲೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ತ್ವರಿತ ಕ್ರಮ ಕೈಗೊಳ್ಳುವುದು ಇಲಾಖೆಗೆ ಅನಿವಾರ್ಯವಾಗಿದೆ. ಮತ್ತೊಂದೆಡೆ ಶಿಕ್ಷಕರ ನೇಮಕ ಪ್ರಕ್ರಿಯೆಗೆ ಕೇಂದ್ರೀಯ ಪ್ರವೇಶ ಘಟಕವು ಸಜ್ಜಾಗಿದೆ.
ಟಿಇಟಿ ಜಾರಿ ಬಗ್ಗೆ ಚಿಂತನೆ: ಶಿಕ್ಷಣ ಹಕ್ಕು ಕಾಯಿದೆ ಪ್ರಕಾರ ಟಿಇಟಿ (ಶಿಕ್ಷಕರ ಪ್ರವೇಶ ಪರೀಕ್ಷೆ)ಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಮಾತ್ರ ಶಿಕ್ಷಕರ ಹುದ್ದೆಗೆ ಪರಿಗಣಿಸಬೇಕು. ರಾಜ್ಯದಲ್ಲಿ ಈ ನಿಯಮವನ್ನು ಇಂದಿನವರೆಗೆ ಜಾರಿಗೊಳಿಸಿಲ್ಲ. ಆದರೆ ಕಾಯಿದೆ ಜಾರಿಯಾದ ಕಾರಣದಿಂದ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪ್ರವೇಶ ಪರೀಕ್ಷೆ ಕಡ್ಡಾಯಗೊಳಿಸಬೇಕಾದ ಅನಿವಾರ್ಯತೆಯನ್ನು ರಾಜ್ಯ ಸರ್ಕಾರ ಎದುರಿಸುತ್ತದೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯೂ ಗಂಭೀರ ಚಿಂತನೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಪ್ರವೇಶ ಪರೀಕ್ಷೆ ಕುರಿತಂತೆ ಎಚ್ಚರವಾಗಿರುವುದು ಒಳಿತು.
ಖಾಲಿ ಹುದ್ದೆಗಳ ಭರ್ತಿಗೆ ಸಿದ್ದರಾಮಯ್ಯ ಒಲವು
4 ಸಾವಿರ ಶಿಕ್ಷಕರ ನೇಮಕ ಹೊರತುಪಡಿಸಿ ಪ್ರತಿವರ್ಷ ನಿವೃತ್ತಿಯಾಗುವ ಶಿಕ್ಷಕರು ಹಾಗೂ ಕಳೆದ ಕೆಲ ವರ್ಷಗಳಿಂದ ಖಾಲಿ ಉಳಿದ ಹುದ್ದೆಗಳನ್ನು ಭರ್ತಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಿಕೊಳ್ಳಲು ಸರ್ಕಾರ ಚಿಂತಿಸಿದೆ. ಎಷ್ಟು ಹುದ್ದೆಗಳು ಖಾಲಿಯಿವೆ ಎಂಬ ಬಗ್ಗೆ ನಿಖರ ಮಾಹಿತಿ ಇನ್ನಷ್ಟೇ ಬರಬೇಕಿದೆ. ಸದ್ಯದಲ್ಲಿಯೇ ರಾಜ್ಯ ಸರ್ಕಾರಕ್ಕೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆಯಿದೆ.
ಅತಿಥಿ ಶಿಕ್ಷಕರ ನೇಮಕಕ್ಕೆ ಒಪ್ಪಿಗೆ ಅಗತ್ಯ ಶಿಕ್ಷಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಹಿಂದಿನ ಸರ್ಕಾರ ಅನುಮತಿ ನೀಡಿತ್ತು. ಕಳೆದ ಶೈಕ್ಷಣಿಕ ವರ್ಷದಲ್ಲಿ ಸುಮಾರು 4 ಸಾವಿರ ಶಿಕ್ಷಕರನ್ನು ಈ ಪ್ರಕಾರ ನೇಮಿಸಿಕೊಳ್ಳಲಾಗಿತ್ತು. ಆ ಕೊರತೆ ನೀಗುವವರೆಗೂ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವಂತೆ ಆಯಾ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ. ಜೂ.1ರಿಂದ ನೇಮಕ ಪ್ರಕ್ರಿಯೆ ಆರಂಭವಾಗಬಹುದು.

Courtesy Kannada Prabha, June 1, 2013