ದೂರಶಿಕ್ಷಣದ ಮೂಲಕ ಎಂಫಿಲ್ ಪದವಿ ಪಡೆದವರಿಗೆ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರ ಹುದ್ದೆ ನೀಡಿದ ಕರ್ನಾಟಕ ಲೋಕಸೇವಾ ಆಯೋಗದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ.  ಡಾ. ಶಂಕರ ಲಮಾಣಿ ಎಂಬುವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಶೈಲೇಂದ್ರಕುಮಾರ್ ಹಾಗೂ ನ್ಯಾ. ಇಂದ್ರಕಲಾ ಅವರಿದ್ದ ವಿಭಾಗೀಯ ಪೀಠ, ತೀರ್ಪನ್ನು ಕಾಯ್ದಿರಿಸಿದೆ.


ವಿವಾದವೇನು?: 2008ರಲ್ಲಿ ಆಯೋಗ ಪ್ರಥಮ ದರ್ಜೆ ಸರ್ಕಾರಿ ಕಾಲೇಜಿನ ಉಪನ್ಯಾಸಕ ಹುದ್ದೆ ರಾಜ್ಯಾದ್ಯಂತ 2,550 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅಧಿಸೂಚನೆ ಹೊರಡಿಸಿತ್ತು. ಆದರೆ, ಇದರಲ್ಲಿ ಸುಮಾರು 184 ಉಪನ್ಯಾಸಕರು ದೂರಶಿಕ್ಷಣದ ಮೂಲಕ ಎಂಫಿಲ್ ಮಾಡಿದವರು ಕೂಡ ಇದ್ದಾರೆ. ಇವರಲ್ಲಿ 53 ಉಪನ್ಯಾಸಕರು ನೇಮಕ ಪ್ರಕ್ರಿಯೆಯ ನಿಯಮಗಳನ್ನು ಪಾಲಿಸಿಲ್ಲ. ಇವರು ವಿನಾಯಕ ಮಿಷನ್ಸ್ ವಿವಿ, ಪೆರಿಯಾರ್ ವಿವಿ, ಮಧುರೈ ಕಾಮರಾಜ್ ವಿವಿ, ಭಾರತೀದಾಸನ್ ವಿವಿ, ಅಣ್ಣಾಮಲೈ ವಿವಿ ಹಾಗೂ ಕುವೆಂಪು ವಿವಿಯಿಂದ ಎಂಫಿಲ್ ಪದವಿಯ ಪ್ರಮಾಣಪತ್ರ ಪಡೆದಿದ್ದಾರೆ. ಆದ್ದರಿಂದ ಇವರ ನೇಮಕ ಆದೇಶ ರದ್ದುಗೊಳಿಸಬೇಕು ಎಂದು ಕೋರಿ ಆಕಾಂಕ್ಷಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ(ಕೆಎಟಿ) ಮೊರೆ ಹೋಗಿದ್ದರು. ಆದರೆ, ದೂರಶಿಕ್ಷಣ ಪದವಿ ಉಪನ್ಯಾಸಕ ಹುದ್ದೆಗೆ ಅರ್ಹತೆಯಲ್ಲ ಎಂಬ ನಿಯಮವಿನ್ನೂ ಜಾರಿಗೆ ಬಂದಿಲ್ಲ ಎಂದು ನ್ಯಾಯಮಂಡಳಿ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.

 Courtesy: Kannada Prabha June26,2013