ವಿಶ್ವವಿದ್ಯಾಲಯ ಅನುದಾನ ಆಯೋಗವು(ಯುಜಿಸಿ)ಪ್ರೊಫೆಸರ್‌ಗಳಿಗೆ ನಿಗದಿ ಪಡಿಸಿದ ನಿವೃತ್ತಿ ವಯಸ್ಸು ಮತ್ತು ವೇತನ ಶ್ರೇಣಿ ನಿಯಮಗಳ ಚೌಕಟ್ಟಿಗೆ ರಾಜ್ಯದ ವಿಶ್ವವಿದ್ಯಾನಿಲಯಗಳು ಬದ್ಧವಾಗಿರಬೇಕಾದ ಅಗತ್ಯವಿಲ್ಲ. ಯುಜಿಸಿ ನಿಯಮಗಳು ರಾಜ್ಯದ ವಿಶ್ವವಿದ್ಯಾಲಯಗಳಿಗೆ ಅನ್ವಯವಾಗುವ ಅಗತ್ಯವಿಲ್ಲ. ರಾಜ್ಯ ಸರಕಾರಗಳೇ ಈ ಬಗ್ಗೆ ತೀರ್ಮಾನ ಕೈಗೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ. ಯುಜಿಸಿ ವೇತನ ಪಡೆಯುತ್ತಿರುವ ರಾಜ್ಯ ವಿವಿಗಳ ಶಿಕ್ಷಕ ಸಮೂಹಕ್ಕೆ ಈ ತೀರ್ಪು ಆತಂಕ ತಂದಿದೆ.

''ಒಂದು ನಿರ್ದಿಷ್ಟ ರಾಜ್ಯವು ಶಿಕ್ಷಕರ ನಿವೃತ್ತಿ ವಯಸ್ಸು ನಿರ್ಧರಿಸುವ ನಿಟ್ಟಿನಲ್ಲಿ ಸಂದಿಗ್ಧಗಳು ಬೇಡ. ರಾಜ್ಯದ ವಿವಿಗಳಿಗೆ ನಿಯಮಗಳನ್ನು ಮಾಡುವ ಅಧಿಕಾರವನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ಹೊಂದಿದೆ. ಆದಾಗ್ಯೂ, ರಾಜ್ಯ ಸರಕಾರಗಳು ಸಹ ಈ ಬಗ್ಗೆ ತೀರ್ಮಾನ ಕೈಗೊಳ್ಳಬಹುದು,'' ಎಂದು ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ.

ದೇಶದ ಎಲ್ಲ ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ಭಾರತೀಯ ವೈದ್ಯ ಮಂಡಳಿ (ಎಂಸಿಐ) ಆರಂಭಿಸಿದ್ದ ಏಕರೂಪದ ಪ್ರವೇಶ ಪರೀಕ್ಷೆಯನ್ನು(ಎನ್‌ಇಇಟಿ) ಅನೂರ್ಜಿತಗೊಳಿಸಿ ಗುರುವಾರ ತೀರ್ಪು ನೀಡಿದ್ದ ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ನೇತೃತ್ವದ ನ್ಯಾಯಪೀಠವೇ ಶುಕ್ರವಾರ ಯುಜಿಸಿ ಸಂಬಂಧಿ ತೀರ್ಪನ್ನು ಪ್ರಕಟಿಸಿದೆ.

ಯುಜಿಸಿ ಮಾರ್ಗಸೂಚಿಗಳ ಜಾರಿ ಮತ್ತು ರಾಜ್ಯ ಸರಕಾರದ ಒಡೆತನದಲ್ಲಿರುವ ಶಿಕ್ಷಣ ಸಂಸ್ಥೆಗಳ ಮೇಲೆ ಆಗುವ ಪರಿಣಾಮ ಕುರಿತಾಗಿ ನಾನಾ ರಾಜ್ಯ ಸರಕಾರಗಳು ಮತ್ತು ಉಪನ್ಯಾಸಕರು ಸಾಕಷ್ಟು ಅರ್ಜಿಗಳನ್ನು ಸಲ್ಲಿಸಿದ್ದರು. ಈ ಸಂಬಂಧ ತೀರ್ಪನ್ನು ಸುಪ್ರೀಂ ಕೋರ್ಟ್ ಪ್ರಕಟಿಸಿದೆ.

''ನಮ್ಮ ಪ್ರಕಾರ, ಆರ್ಥಿಕ ಮತ್ತು ಇತರೆ ವಿಷಯಗಳ ಸಂಬಂಧ ಪ್ರಜ್ಞಾಪೂರ್ವಕವಾಗಿ ರಾಜ್ಯ ಸರಕಾರಗಳು ತೀರ್ಮಾನ ಕೈಗೊಳ್ಳದ ಹೊರತು, ಯುಜಿಸಿ ಮಾಡುವ ಶಿಫಾರಸುಗಳು ರಾಜ್ಯ ಸರಕಾರದ ವಿವಿಗಳಿಗೆ ತಾನೇತಾನಾಗಿ ಅನ್ವಯವಾಗುವುದಿಲ್ಲ,'' ಎಂದು ಸುಪ್ರೀಂ ಸ್ಪಷ್ಟಪಡಿಸಿದೆ. ಆದಾಗ್ಯೂ, ತಮ್ಮ ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ನಿಯಮ ವಿಧಿಸುವ ಅಧಿಕಾರ ಯುಜಿಸಿಗೆ ಇಲ್ಲ ಎನ್ನುವ ರಾಜ್ಯ ಸರಕಾರಗಳ ಅರ್ಜಿಯನ್ನು ಸುಪ್ರೀಂ ತಳ್ಳಿ ಹಾಕಿದೆ.

ಸುಪ್ರೀಂ ತೀರ್ಪಿನಿಂದಾಗಿ ರಾಜ್ಯ ಸರಕಾರಗಳು ತಮ್ಮ ವಿವೇಚನೆಯಂತೆ ನಿಯಮ ರೂಪಿಸಲು ಅನುಕೂಲವಾಗಲಿದೆ. ಅಲ್ಲದೇ ಯುಜಿಸಿಯ ದುಬಾರಿ ವೇತನ ಮತ್ತು ನಿವೃತ್ತಿ ವಯಸ್ಸನ್ನು ಕಡಿತ ಮಾಡಲು ಅಧಿಕಾರ ದೊರೆಯಲಿದ್ದು, ರಾಜ್ಯ ವಿವಿಗಳ ಉಪನ್ಯಾಸಕರಿಗೆ ತೀರ್ಪಿನಿಂದ ಹೊಡೆತ ಬೀಳಲಿದೆ.

Courtesy: Vijaya Karnataka, July 20 2013