ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಏಕರೂಪ ಆಂತರಿಕ ಮೌಲ್ಯಮಾಪನ ಪದ್ಧತಿ ಜಾರಿಗೆ ತರುವ ನಿಟ್ಟಿನಲ್ಲಿ ಆಂತರಿಕ ಮೌಲ್ಯಮಾಪನ ಪದ್ಧತಿಯಲ್ಲಿ ಕೆಲವು ಬದಲಾವಣೆ ಮಾಡುವಂತೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ಗೆ ಬೆಂಗಳೂರು ವಿವಿ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಿದೆ. 
ಬೆಂಗಳೂರು ವಿವಿ ಜ್ಞಾನಭಾರತಿ ಆವರಣದಲ್ಲಿ ಮಂಗಳವಾರ ನಡೆದ ವಿದ್ಯಾವಿಷಯಕ ಪರಿಷತ್ತಿನಲ್ಲಿ ಆಂತರಿಕ ಮೌಲ್ಯಮಾಪನದ ಬಗ್ಗೆ ಚರ್ಚಿಸಲಾಯಿತು. ವಿಶ್ವವಿದ್ಯಾಲಯಗಳಿಂದ ಸ್ವಾಯತ್ತೆ ಪಡೆದಿರುವ ಕಾಲೇಜುಗಳಲ್ಲಿ ಆಂತರಿಕ ಮೌಲ್ಯಮಾಪನ ಶೇ.40ರಷ್ಟು ಇದ್ದು, ಸಂಯೋಜನೆ ಪಡೆದಿರುವ ಕಾಲೇಜುಗಳಲ್ಲಿ ಶೇ.20ರಷ್ಟಿದೆ. ಅಲ್ಲದೆ, ಗ್ರೇಡ್ ನೀಡುವ ಪದ್ಧತಿ ಇರುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತಿಲ್ಲ. 
 ಬದಲಾಗಿ ಹಳೆಯ ಪದ್ಧತಿಯಂತೆ ನಿರ್ದಿಷ್ಟ ಅಂಕಗಳಿಗೆ ಅಂತರಿಕ ಮೌಲ್ಯಮಾಪನ ಮಾಡುವುದು ಉತ್ತಮ. ಇದೇ ಪದ್ಧತಿ ಎಲ್ಲಾ ವಿಶ್ವವಿದ್ಯಾಲಯಗಳಲ್ಲೂ ಜಾರಿಯಾಗಬೇಕು. ಆ ಮೂಲಕ ಎಲ್ಲಾ ವಿಶ್ವವಿದ್ಯಾಲಯಗಳಲ್ಲೂ ಏಕರೂಪ ಆಂತರಿಕ ಮೌಲ್ಯಮಾಪನ ಜಾರಿಗೆ ತರುವಂತೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ವಿವಿ ಕುಲಪತಿ ಪ್ರೊ.ಬಿ. ತಿಮ್ಮೇಗೌಡ ಸಭೆಯಲ್ಲಿ ತಿಳಿಸಿದರು. 
ಹಳೆಯ ಪದ್ಧತಿ: 2010ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆಂತರಿಕ ಮೌಲ್ಯ ಮಾಪನಕ್ಕೆ ಗ್ರೇಡಿಂಗ್ ಪದ್ಧತಿ ಜಾರಿಗೊಳಿಸಿತು. 
 ಈ ಹಿಂದೆ 10 ಅಂಕಗಳಿಗೆ ಆಂತರಿಕ ಮೌಲ್ಯಮಾಪನ ನಡೆಯುತ್ತಿತ್ತು. ಈ ಗ್ರೇಡಿಂಗ್ ಪದ್ಧತಿಯಿಂದ ವಿದ್ಯಾರ್ಥಿಗಳಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಅಲ್ಲದೆ, ಎಲ್ಲಾ ವಿಶ್ವವಿದ್ಯಾಲಯಗಳು ಅಂತರಿಕ ಮೌಲ್ಯಮಾಪನಕ್ಕೆ ನಿಗದಿತ ಅಂಕಗಳನ್ನು ಮೀಸಲಿಟ್ಟಿರುವುದರಿಂದ ಇದೇ ಪದ್ಧತಿಯನ್ನು ಎಲ್ಲಾ ವಿಶ್ವವಿದ್ಯಾಲಯ ಪಾಲಿಸುವುದು ಉತ್ತಮ ಎಂಬ ವಿಚಾರಕ್ಕೆ ಬಹುತೇಕ ಸದಸ್ಯರು ಸಭೆಯಲ್ಲಿ ಒಪ್ಪಿಗೆ ಸೂಚಿಸಿದರು. 
ಶೂನ್ಯಕ್ಕೂ ಬೆಲೆ ಇದೆ: ಒಂದು ವಿಷಯದ ಪರೀಕ್ಷೆಯಲ್ಲಿ ಶೂನ್ಯ ಅಂಕಗಳಿಸಿದ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿಸಲ್ಲಿಸಲು ಅವಕಾಶವಿರಲಿಲ್ಲ. ಆದರೆ, ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಕನಿಷ್ಠ ಶೂನ್ಯ ಅಂಕಗಳಿಸಿದವನು ಕೂಡ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಸಭೆಯಿಂದ ಒಪ್ಪಿಗೆ ಪಡೆಯಲಾಯಿತು. 
16ಕ್ಕೆ ಮರು ಸಂಯೋಜನೆ 11ಕ್ಕೆ ರದ್ದು: ಬೆಂಗಳೂರು ವಿಶ್ವವಿದ್ಯಾಲಯ ಗಣಿತಶಾಸ್ತ್ರಜ್ಞರಾದ ಪ್ರೊ.ಐ.ಎಸ್. ಶಿವಕುಮಾರ ನೇತೃತ್ವದ ಸ್ಥಳೀಯ ವಿಚಾರಣ ಸಮಿತಿ ಸಲ್ಲಿಸಿದ ವರದಿಯ ಆಧಾರದ ಮೇಲೆ ಶೇ.50ರಷ್ಟು ಗುಣಮಟ್ಟ ಕಾಯ್ದುಕೊಂಡಿರುವ 16 ಬಿಎಡ್ ಕಾಲೇಜುಗಳಿಗೆ ಸಂಯೋಜನೆ ನವೀಕರಿಸಲು ಸಭೆ ತೀರ್ಮಾನಿಸಿತು. 
ಅಲ್ಲದೆ, ಪ್ರೊ. ಹನುಮಂತರಾಯಪ್ಪ ನೇತೃತ್ವದ ಸ್ಥಳೀಯ ವಿಚಾರ ಸಮಿತಿ ನೀಡಿದ ವರದಿ ಅಧಾರದ ಮೇಲೆ ಸೂಕ್ತ ಮೂಲಸೌಕರ್ಯ ಹೊಂದಿದರ 11 ಪದವಿ ಕಾಲೇಜುಗಳ ಸಂಯೋಜನೆ ರದ್ದುಗೊಳಿಸಲು ಸಭೆ ನಿರ್ಧರಿಸಿತು. ಈ ಸಭೆಯಲ್ಲಿ ಕುಲಸಚಿವ(ಮೌಲ್ಯಮಾಪನ) ಪ್ರೊ.ಆರ್.ಕೆ. ಸೋಮಶೇಖರ್ ಮತ್ತು ಕುಲಸಚಿವೆ ಪ್ರೊ.ಕೆ.ಕೆ. ಸೀತಮ್ಮ ಭಾಗವಹಿಸಿದ್ದರು. 
ಮುಂದಿನ ವರ್ಷದಿಂದ ಪ್ರವೇಶ ಪರೀಕ್ಷೆ 
ಮುಂದಿನ ಶೈಕ್ಷಣಿಕ ವರ್ಷದಿಂದ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ 'ಪ್ರವೇಶ ಪರೀಕ್ಷೆ' ನಡೆಸಲು ವಿವಿ ಚಿಂತಿಸುತ್ತಿದೆ. ಪ್ರವೇಶ ಪರೀಕ್ಷೆ ನಡೆಸುವ ಬಗ್ಗೆ ಕುಲಪತಿಗಳು ಸಭೆಯಲ್ಲಿ ಚರ್ಚಿಸಿದರು. ಆನಂತರ ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ಎದುರಿಸುವುದು ಕಷ್ಟವಾಗುತ್ತದೆ. ನಾನು ಈ ಬಗ್ಗೆ ಚಿಂತಿಸಿದ್ದೇನೆ. ಇದೇ ಅಂತಿಮ ನಿರ್ಧಾರ ಅಲ್ಲ. ತಜ್ಞರ ಅಭಿಪ್ರಾಯ ಪಡೆದು ಆನಂತರ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.  2009ರಲ್ಲಿ ಪ್ರವೇಶ ಪರೀಕ್ಷೆ ವಿಶ್ವವಿದ್ಯಾಲಯದಲ್ಲಿ ಚಾಲ್ತಿಯಲ್ಲಿತ್ತು. ಆನಂತರ ಇದನ್ನು ತೆಗೆದು ಹಾಕಿ ಮೆರಿಟ್ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲಾಗುತ್ತಿತ್ತು.

ಕ್ರಪೆ: ಕನ್ನಡ ಪ್ರಭ, ಅಕ್ಟೋಬರ್ 30 , 2013