ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು2014 ನವೆಂಬರ್ ತಿಂಗಳ ವೇತನವನ್ನು  ಪುನರ್ ನಿಗದೀಕರಣ ಮಾಡಿ ಅನುದಾನ ಕಡಿತಗೊಳಿಸಿ ಬಿಡುಗಡೆಮಾಡಿರುವುದು ರಾಜ್ಯದ ಸಮಸ್ತ ಖಾಸಗಿ ಕಾಲೇಜುಗಳ ಬೋಧಕ / ಬೋಧಕೇತರರಿಗೆ ಆಘಾತಕಾರಿಯಾಗಿದೆ. ಈಗಾಗಲೇ 2014 ರ ಅಧಿನಿಯಮವನ್ನು ತಿದ್ದುಪಡಿಮಾಡಿ ವಿಧಾನಮಂಡಲದಲ್ಲಿ ಅಂಗೀಕಾರ ಮಾಡುವ ಸಲುವಾಗಿ ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ತಿನ ಹಿರಿಯ ಸದಸ್ಯರಾದ ಶ್ರೀಮಾನ್ ಬಸವರಾಜ ಹೊರಟ್ಟಿಯವರ ಅಧ್ಯಕ್ಷತೆಯಲ್ಲಿ ಆರು ಜನ ವಿಧಾನ ಪರಿಷತ್ತ ಸದಸ್ಯರನ್ನು ಒಳಗೊಂಡ ಸದನ ಸಮಿತಿಯನ್ನು ರಚಿಸಲಾಗಿದೆ.

ಈ ಸಮಿತಿಯು ಈಗಾಗಲೇ ಮೂರು ಬಾರಿ ಸಮಿತಿ ಸಭೆಯನ್ನು ನಡೆಸಿದ್ದು, ಪ್ರತಿ ಸಭೆಯಲ್ಲಿಯೂ 2014 ರ ನಿಯಮವನ್ನು ತಿದ್ದುಪಡಿಮಾಡುವವರೆಗೆ ಯಾವುದೇ ಕಾರಣಕ್ಕೂ ಸಂಬಳ ಪುನರ್ ನಿಗದೀಕರಣ ಮಾಡುವುದಾಗಲೀ, ಅಥವಾ ಸಂಬಳ ಸ್ಥಗಿತಗೊಳಿಸುವುದಾಗಲಿ ಮಾಡಬಾರದೆಂದು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಜನೀಶ ಗೊಯಲ್ ಅವರಿಗೆ ಲಿಖಿತ ನಿರ್ದೇಶನವನ್ನು ನೀಡಲಾಗಿದೆ, ಅಲ್ಲದೇ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಸಿದ್ದರಾಮಯ್ಯನವರು ಕೂಡಾ ಕೂಡಲೇ ಸಂಬಳವನ್ನು ಬಿಡುಗಡೆಮಾಡಲು ಆದೇಶ ನೀಡಿದಾಗ್ಯು ಸಹ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾದ ಶ್ರೀ ಬಿ. ಜಿ. ನಂದಕುಮಾರ, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಜನೀಶ ಗೊಯಲ್ ಮತ್ತು ಉನ್ನತ ಶಿಕ್ಷಣ ಸಚಿವರಾದ ಶ್ರೀ ಆರ್. ವಿ ದೇಶಪಾಂಡೆಯವರ ಹಠಮಾರಿ ಧೋರಣೆಯಿಂದಾಗಿ ಕಾಲ್ಪನಿಕ ಬಡ್ತಿ ಸಮಸ್ಯೆ ಎದುರಿಸುತ್ತಿರುವ ಸಮಸ್ತ ಕಾಲೇಜುಗಳ ಬೋಧಕ/ಬೋಧಕೇತರ ಸಿಬ್ಬಂದ್ದಿ ವರ್ಗದ ನವೆಂಬರ್ ತಿಂಗಳ ಸಂಬಳವನ್ನು ಪುನರ್ ನಿಗದೀಕರಣ ಮಾಡವ ದುಸ್ಸಾಹಸವನ್ನು ಮಾಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ದಿನಾಂಕ : 24-12-2014 ರಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಮತ್ತು ಕಾಲೇಜು ಅಧ್ಯಾಪಕರ ಸಂಘಗಳ  ಒಕ್ಕೂಟದ ಪಧಾದಿಕಾರಿಗಳ ಸಭೆಯಲ್ಲಿ  ಸರ್ಕಾರದ  ಉನ್ನತ ಶಿಕ್ಷಣ ಇಲಾಖೆಯ ಶಿಕ್ಷಕ ವಿರೋಧಿ ನೀತಿಗಳನ್ನು ಪ್ರಬಲವಾಗಿ ಖಂಡಿಸಲಾಯಿತು.  ಅಲ್ಲದೇ ದಿನಾಂಕ : 27-12-2014 ರಂದು ರಾಜ್ಯದ ಆರು ಪ್ರಾದೇಶಿಕ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಗಳಾದ ಬೆಂಗಳೂರ, ಮೈಸೂರ, ಮಂಗಳೂರ, ಶಿವಮೊಗ್ಗ, ಧಾರವಾಡ ಹಾಗೂ ಗುಲಬರ್ಗಾ ಮುಂದೆ ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳ ಸಮಸ್ತ ಬೋಧಕ/ಬೋಧಕೇತರರ ಸಿಬ್ಬಂದ್ದಿ ವರ್ಗದವರು ರಜೆ ಹಾಕಿ ವರ್ಗ / ಮೌಲ್ಯಮಾಪನ ಬಹಿಷ್ಕರಿಸಿ ಪ್ರತಿಭಟನಾ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸುವರು.