ಡಾ.ಎಚ್.ಪ್ರಕಾಶ್, ದೇವರಾಜ್ ಎಲ್


ಪ್ರಭಾವಿ ವ್ಯಕ್ತಿಗಳ ಮೂಲಕ ಲಾಬಿ ನಡೆಸಿ ಪ್ರಥಮ ದರ್ಜೆ ಕಾಲೇಜಿನ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ತಮಗೆ ಬೇಕಾದ ಸ್ಥಳಕ್ಕೆ ವರ್ಗಾವಣೆ ಮಾಡಿಸಿಕೊಳ್ಳುವುದಕ್ಕೆ ಸದ್ಯದಲ್ಲೇ ಬೀಳಲಿದೆ ಬ್ರೇಕ್.
ಇದಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯ(ಕಾಲೇಜು ಶಿಕ್ಷಣ ಇಲಾಖೆ ಸಿಬ್ಬಂದಿ ವರ್ಗಾವಣೆ ನಿಯಂತ್ರಣ) ಜಾರಿಗೆ ತರುತ್ತಿದೆ. ಈ ಕುರಿತು ಮೇ 8 ರಂದು ಸರ್ಕಾರ ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಿದೆ. ಈ ಅಧಿನಿಯಮ ಕಾಲೇಜು ಶಿಕ್ಷಣ ಇಲಾಖೆಗೆ ಕೈ ಸೇರಿದ್ದು, ಸದ್ಯದಲ್ಲೇ ವರ್ಗಾವಣೆ ರೂಪುರೇಷೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಿದೆ. ಹೀಗಾಗಿ ವರ್ಗಾವಣೆ ಲಾಬಿಗೆ ಕಡಿವಾಣ ಬೀಳಲಿದೆ.
ಅಧಿನಿಯಮದಲ್ಲೇನಿದೆ?: ಸರ್ಕಾರ ಹೊರಡಿಸಿರುವ ಅಧಿನಿಯಮದಲ್ಲಿ ವರ್ಗಾವಣೆಗೆ ಮಾರ್ಗಸೂಚಿ ಇದೆ. ವರ್ಗಾವಣೆ ಎ.ಬಿ.ಸಿ ಎಂಬ ವಲಯಗಳ ಮೂಲಕ ನಡೆಯಲಿದೆ. 'ಎ'- ವಲಯ ಬಿಬಿಎಂಪಿ ವ್ಯಾಪ್ತಿಗೆ ಸೇರಲಿದೆ. 'ಬಿ'- ವಲಯ ತಾಲೂಕು ಮಟ್ಟ, 'ಸಿ'- ವಲಯ ಗ್ರಾಮೀಣ ಪ್ರದೇಶಗಳಿಗೆ ಸೇರಲಿವೆ. ಸೆಕ್ಷನ್ 3 ಪ್ರಕಾರ ಹೊಸದಾಗಿ ಪ್ರಾಂಶುಪಾಲರು, ಶಿಕ್ಷಕರು, ಶಿಕ್ಷಕರೇತರನ್ನು ನೇಮಕ ಮಾಡುವ ಮೊದಲು ಸಿ ವಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಿ ಆನಂತರ ಬೇರೆ ವಲಯಗಳಲ್ಲಿರುವ ಹುದ್ದೆಗಳ ಭರ್ತಿ ನಡೆಯಲಿದೆ. ಒಂದು ವೇಳೆ ಸಿ ವಲಯದಲ್ಲಿ ಹುದ್ದೆಗಳು ಖಾಲಿ ಇಲ್ಲವಾದರೆ, ಈ ವಲಯದಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಅಥವಾ ಕನಿಷ್ಠ ಅವಧಿ ಸೇವೆ ಸಲ್ಲಿಸಿರುವವರಿಗೆ ಸೇವಾವಧಿ ಅಧಾರದ ಮೇಲೆ ವರ್ಗಾವಣೆ ನಡೆಯಲಿದೆ. ಕನಿಷ್ಠ ಎಷ್ಟು ವರ್ಷ ಸೇವೆ ಸಲ್ಲಿಸಿರಬೇಕು ಎಂಬ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ ನಿಯಮ ರೂಪಿಸಲಿದೆ.
ಈ ಹಿಂದೆ ಹೇಗಿತ್ತು?: ಈ ಹಿಂದೆ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಯ ಸೇವಾ ಅವಧಿ ನೋಡಿ ವರ್ಗಾವಣೆ ನಡೆಯುತ್ತಿರಲಿಲ್ಲ. ಬದಲಾಗಿ ಗಂಡ ಒಂದು ಜಿಲ್ಲೆ ಮತ್ತು ಹೆಂಡತಿ ಮತ್ತೊಂದು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ದಂಪತಿ ಮನವಿ ಮೇರೆಗೆ ವರ್ಗಾವಣೆ ಮಾಡಿಕೊಳಲಾಗುತ್ತಿತ್ತು. ಈ ಸಂದರ್ಭದಲ್ಲಿ ಮಧ್ಯರ್ತಿಗಳು ಹಣ ಪಡೆದು ಅನ್ಯಾಯ ಮಾಡುತ್ತಿದ್ದರು ಎನ್ನುತ್ತಾರೆ ರಾಜ್ಯ ಸರ್ಕಾರಿ ಕಾಲೇಜುಗಳ ನಿರ್ದೇಶನಾಲಯದ ಶಿಕ್ಷರ ಸಂಘದ ಅಧ್ಯಕ್ಷರಾದ ಡಾ.ಎಚ್.ಪ್ರಕಾಶ್.
ಕೌನ್ಸೆಲಿಂಗ್ ಮೂಲಕ: ಪ್ರಥಮ ದರ್ಜೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗಾವಣೆಗೆ ಯಾವುದೇ ಕಾಯ್ದೆ ಇದುವರೆಗೂ ಇರಲಿಲ್ಲ. ಆದರೆ, ಪ್ರಾಥಮಿಕ ಮತ್ತು ಪ್ರೌಢಶಾಲಾ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗಾವಣೆಗೆ ಕೌನ್ಸೆಲಿಂಗ್ ನಡೆಸಲಾಗುತ್ತಿತ್ತು. ಇದೇ ಪದ್ಧತಿಯನ್ನು ಇದೀಗ ಕಾಲೇಜು ಶಿಕ್ಷಣ ಇಲಾಖೆಗೂ ಅನ್ವಯಿಸಲಾಗುತ್ತಿದೆ.
ಈ ವರ್ಗಾವಣೆ ಕಾಯ್ದೆ ಜಾರಿಗೆ ತರುವುದರಿಂದ ಮಧ್ಯವರ್ತಿ ಹಾವಳಿ ಕಡಿಮೆಯಾಗುತ್ತದೆ. ವರ್ಗಾವಣೆಯಲ್ಲಿ
ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ

Courtesy: Kannada Prabha, May 22, 2013