-ಕವಿತಾ ರೈ, ಮೈಸೂರು

ಯಾವುದೇ ಬಗೆಯ ಆದರ್ಶಗಳನ್ನು ಬಿತ್ತಲಾಗದ ಒಂದು ಅರ್ಥಹೀನ ಜ್ಞಾನಾರ್ಜನೆಯ ಮಾರ್ಗದಲ್ಲಿ ಇಡೀ ದೇಶದ ಶಿಕ್ಷಣ ವ್ಯವಸ್ಥೆ ಮುಂದುವರಿಯುತ್ತಿದೆ ಎಂದು ನನಗನ್ನಿಸುತ್ತಿದೆ. ವಿಶ್ವಮಾರುಕಟ್ಟೆಯ  ಅರ್ಥನೀತಿ ಮತ್ತು ಅದರ ಹಿಂದಿರುವ ಪ್ರಬಲ ಬಂಡವಾಳಶಾಹಿ ಮೌಲ್ಯಗಳು ಇಡೀ ಶಿಕ್ಷಣ ಕ್ಷೇತ್ರವನ್ನು ಆಳಲು ಆರಂಭಿಸಿವೆ. ಪರಿಣಾಮವಾಗಿ, ಖಾಸಗೀ ಶಿಕ್ಷಣ ವ್ಯವಸ್ಥೆಯ ಒಳಗೆ ಸಾಮಾಜಿಕ ಕಳಕಳಿ ಎಂಬುದೇ ಸಂಪೂರ್ಣವಾಗಿ ನಿರಸನಗೊಂಡಿದೆ. ಇನ್ನೊಂದೆಡೆ ಸಾಮಾಜಿಕ ಹಿತ ಕಾಯಬೇಕಾದ ಸರ್ಕಾರದ ನೀತಿ ಕೂಡ ಬೆಲೆ ತೆತ್ತು ಶಿಕ್ಷಣ (education at a cost) ಎಂಬ ಶ್ರಿಮಂತಪರ ನಿಲುವನ್ನು ಪೋಷಿಸುತ್ತಿವೆ.

ಕಳೆದ ಎರಡು ದಶಕಗಳಲ್ಲಿ ಅತಿ ಶೀಘ್ರಗತಿಯಲ್ಲಿ ಇಂಡಿಯಾದಲ್ಲಿ ಕೈಗಾರಿಕಾ ಸಮಾಜದ ಮೌಲ್ಯಗಳೇ ಪರಮವಾಗಿ ಬಿಟ್ಟಿವೆ. ಇದು ಕಾರಣವಾಗಿ ಮ್ಯೋನೇಜ್‌ಮೆಂಟ್, ಮಾರ್ಕೆಟಿಂಗ್, ಕಂಪ್ಯೂಟರ್, ಬಯೋಟೆಕ್ನಾಲಜಿ, ಮೆಡಿಕಲ್, ಇಂಜಿನಿಯರಿಂಗ್ ಮುಂತಾದ ಸೀಮಿತ ಅನ್ವಯಿಕ ಸಮಾಜ ವಿಜ್ಞಾನ ಹಾಗೂ ಆನ್ವಯಿಕ ವಿಜ್ಞಾನ ಶಾಖೆಗಳ ಮೇಲೆ ಸಂಪೂರ್ಣವಾಗಿ ದೇಶದ ವಿದ್ಯಾಕ್ಷೇತ್ರವನ್ನು
ನಿಲ್ಲಿಸಲಾಗುತ್ತಿದೆ. ಪರಿಣಾಮವಾಗಿ, ಅವು ಅತಿ ಶಕ್ತವಾಗಿ ವಿದ್ಯಾಕ್ಷೇತ್ರದ ಮೂಲ ಶಾಖೆಗಳ ಬೇರುಗಳನ್ನು ಕತ್ತರಿಸಿ ಹಾಕುತ್ತಿವೆ.

ಅಲ್ಲದೆ ಹುಸಿ ವಿದ್ಯಾಕ್ಷೇತ್ರಗಳೇ ನೈಜ ವಿದ್ಯಾಕ್ಷೇತ್ರಗಳನ್ನು ವ್ಯಾಪಿಸಿಕೊಂಡು ವಿಜೃಂಭಿಸುತ್ತಿವೆ. ವೃತ್ತಿಪರ ಶಿಕ್ಷಣಕ್ಕೆ ಇಂದು ಸಿಗುತ್ತಿರುವ ಈ ಅತಿ ಒತ್ತು, ವ್ಯಕ್ತಿ-ವ್ಯಕ್ತಿಗಳ ಸಂಬಂಧಗಳನ್ನು ಮಾನವೀಯ ನೆಲೆಯಲ್ಲಿ ರೂಪಿಸಲು ಸಂಪೂರ್ಣವಾಗಿ ಸೋತಿವೆ. ಇದರ ಅರ್ಥ, ವೃತ್ತಿಪರ ಶಿಕ್ಷಣ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ತೊಡಕಾಗಿದೆ ಎಂಬುದಲ್ಲ, ಉಳಿದ ಪಾರಂಪರಿಕ ಜ್ಞಾನಕ್ಷೇತ್ರಗಳನ್ನು ಪೂರ್ಣವಾಗಿ ತೊಡೆದುಹಾಕುವಂತೆ ರೂಪಿತಗೊಂಡಿರುವ ವೃತ್ತಿ ಶಿಕ್ಷಣದಿಂದ ಏಕರೂಪದ ಏಕಮುಖಿ ರಾಕ್ಷಸೀ ಸಮಾಜವಾಗಿ ದೇಶವು ಪರಿವರ್ತನೆಗೊಳ್ಳುವ ಅಪಾಯವಿದೆ ಎಂಬುದಾಗಿದೆ.

ವಸಾಹತುಶಾಹಿಗಳಿಂದ ಬಿಡುಗಡೆಗೊಂಡ ಈ ದೇಶಕ್ಕೆ 65 ವರ್ಷಗಳ ಪ್ರಜಾಪ್ರಭುತ್ವದ ಚರಿತ್ರೆ ಇದ್ದರೂ ತನ್ನದೇ ಎಂಬ ಶಿಕ್ಷಣ ಕ್ರಮವಿಲ್ಲದಿರುವುದು ವಿಪರ್ಯಾಸ. ಈ ದೇಶದ ಪಾರಂಪರಿಕವಾದ ಅಸಂಖ್ಯಾತ ದೇಶಿ ಕಸುಬುಗಳೂ, ಉಪಕಸುಬುಗಳೂ ಆಧುನಿಕ ಶಿಕ್ಷಣದ ಕಾರಣದಿಂದ ಮೂಲೆಗುಂಪಾಗಿವೆ. ಬಹಳಷ್ಟು ಹೇಳಹೆಸರಿಲ್ಲದೆ ನಿರ್ನಾಮಗೊಂಡಿವೆ. ಅವುಗಳನ್ನು ಅವಲಂಬಿಸಿ ಬದುಕುತ್ತಿದ್ದ ಜನರ ಜೀವನ ಬೀದಿಗೆ ಬಿದ್ದಿದೆ. ಕೆಲವೇ ಕೆಲವು ವಿದ್ಯಾಕ್ಷೇತ್ರಗಳ ಅತಿ ಬೆಳವಣಿಗೆಯಿಂದ ತತ್ಕಾಲಕ್ಕೆ ಒಂದು ದೇಶದ ಆದಾಯವು ಹೆಚ್ಚಾದರೂ ಕೂಡ ದೀರ್ಘಾವಧಿಯಲ್ಲಿ ಇಡೀ ಸುಭದ್ರ ದೇಶ ನಿರ್ಮಾಣಕ್ಕೆ ಅಷ್ಟೇನೂ ಸಹಕಾರಿಯಲ್ಲ.

ಉದಾ: 1960ರ ದಶಕದಲ್ಲಿ ಅಮೇರಿಕಾ ದೇಶಕ್ಕೆ ಇದ್ದ ಆಂತರಿಕ ಅಗತ್ಯಗಳ ಕಾರಣಗಳಿಂದ ಆ ಸಂದರ್ಭದಲ್ಲಿ ಗಣಿತ ಶಿಕ್ಷಣ ಶ್ರೇಷ್ಠವೆಂಬ ಮೌಲ್ಯವನ್ನು ಹುಟ್ಟುಹಾಕಲಾಗಿತ್ತು.ಇದರಿಂದಾಗಿ ಭಾರತದಲ್ಲಿ ಗಣಿತ ಪದವಿಗೆ ಇನ್ನಿಲ್ಲದಂತೆ ಬೇಡಿಕೆ ಹೆಚ್ಚಾಗಿತ್ತು. ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಮಾಹಿತಿ ತಂತ್ರಜ್ಞಾನ ಆಧಾರಿತ ಅರ್ಥವ್ಯವಸ್ಥೆಗೆ ಅಮೆರಿಕವು ನೀಡುತ್ತ ಬಂದ ಪ್ರೋತ್ಸಾಹದ ಕಾರಣದಿಂದಾಗಿ ಭಾರತದಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಶಿಕ್ಷಣಕ್ಕೆ ದೇಶದ ಯುವ ಜನತೆ ಮುಗಿ ಬೀಳುವ ಪರಿಸ್ಥಿತಿ ನಿರ್ಮಾಣಗೊಂಡಿತು.ಉನ್ನತ ಶಿಕ್ಷಣವು ಮಾರುಕಟ್ಟೆಯ ಮೌಲ್ಯಗಳನ್ನು ಅನುಸರಿಸುತ್ತಾ ಅದರ ಹಿಂದಿರುವ ಪೈಪೋಟಿ ಸಂಸ್ಕೃತಿಯನ್ನು ಸ್ವೀಕರಿಸಿತು.ಫಲವಾಗಿ ಮಾರುಕಟ್ಟೆಯ ನಿರ್ಮಿತಿಯೊಳಗೇ ಅಂತರ್ಗತವಾಗಿರುವ ಸ್ಪರ್ಧಾತ್ಮಕ ದಕ್ಷತೆ, ಸ್ವಾರ್ಥ, ಪೈಪೋಟಿ, ಆಕ್ರಮಣಶೀಲತೆ, ದಬ್ಬಾಳಿಕೆ, ಹಿಂಸೆ, ಅಸಮಾನತೆ, ಅನ್ಯಾಯಗಳೂ ಶಿಕ್ಷಣ ಕ್ಷೇತ್ರದ ಅನಿವಾರ್ಯತೆಗಳೇನೋ ಎಂಬ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಸಂಕುಚಿತ ವೃತ್ತಿಪರ ಶಿಕ್ಷಣಕ್ಕೆ ಸೀಮಿತವಾದ ಶಿಕ್ಷಣ ವ್ಯವಸ್ಥೆಯಿಂದ ಸತ್ಪ್ರಜೆಗಳ ಸಮಾಜ ನಿರ್ಮಾಣವು ಅಸಾಧ್ಯ. ಸುದೀರ್ಘ ಇತಿಹಾಸವಿರುವ, ಪದರು ಒಳಪದರುಗಳಿರುವ ಭಾರತೀಯ ಸಮಾಜದ ಸಂಕೀರ್ಣತೆಯನ್ನು ಗ್ರಹಿಸುವ ಸಾಮರ್ಥ್ಯ, ಒಳನೋಟಗಳು ವೃತ್ತಿಪರ ಶಿಕ್ಷಣದಿಂದ ದೊರಕುವುದು ಅಸಂಭವವಾಗಿದೆ. ಬುದ್ದಿಯ ಪರಿಧಿಯನ್ನು ವಿಸ್ತರಿಸುವ ಬದಲು ಸಂಕುಚಿತಗೊಳಿಸಿ ಊಹೆಗೂ ನಿಲುಕದ ಸಾಧಾರಣಿಗ (ಞಛಿಜಿಟ್ಚ್ಟಛಿ) ನನ್ನಾಗಿ ಇಂದಿನ ಶಿಕ್ಷಣ ಪರಿವರ್ತಿಸುತ್ತಿದೆ. ಶಿಕ್ಷಣದಲ್ಲಿ ದಕ್ಷತೆಗೆ ನೀಡುವ ಮಹತ್ವ ಒಂದು ಹಂತದವರೆಗೆ ಮಾತ್ರ ಅಗತ್ಯ. ಆದರೆ ಇದೇ ಅತಿಯಾದರೆ ದಕ್ಷತೆಯೆ ದಮನ ಮತ್ತು
ಶೋಷಣೆಗಳಾಗಿ ರೂಪಾಂತರಗೊಂಡು ಬಿಡುತ್ತದೆ.

ಕೇವಲ ವಿಷಯ, ಪಾಂಡಿತ್ಯ, ದಕ್ಷತೆಗಳಷ್ಟೇ ಶಿಕ್ಷಣದ ಮೂಲ ಉದ್ದೇಶಗಳಲ್ಲ. ಬದಲಿಗೆ ಒಳ್ಳೆಯತನದಲ್ಲಿ ವಿದ್ಯಾರ್ಥಿ ಅರಳಿಕೊಳ್ಳುವುದು ಎಂದು ತತ್ವಜ್ಞಾನಿ ಜೆ. ಕೃಷ್ಣಮೂರ್ತಿ ಹೇಳಿದ್ದನ್ನು ನೆನಪಿಸಿಕೊಳ್ಳಬೇಕಾದ್ದು ಇಲ್ಲಿಯೇ. ಇದನ್ನು ಮನಗಂಡೆ 30-40 ವರ್ಷಗಳ ಹಿಂದೆ ವಿಜ್ಞಾನದ ವಿದ್ಯಾರ್ಥಿಗಳಿಗೆ ಸಾಮಾನ್ಯ ಸಮಾಜ ವಿಜ್ಞಾನ ಶಿಕ್ಷಣವನ್ನೂ, ಸಮಾಜ ವಿಜ್ಞಾನ ವಿದ್ಯಾರ್ಥಿಗಳಿಗೆ
ಸಾಮಾನ್ಯ ವಿಜ್ಞಾನದ ಶಿಕ್ಷಣವನ್ನೂ ಕಡ್ಡಾಯವಾಗಿ ನೀಡುವ ಶಿಕ್ಷಣ ವ್ಯವಸ್ಥೆಯಿತ್ತು. ವೈದ್ಯಕೀಯ, ಎಂಜಿನಿಯರಿಂಗ್ ಶಿಕ್ಷಣದಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಆರಂಭದ ಹಂತದಲ್ಲಿ ಬೋಧಿಸಲಾಗುತ್ತಿತ್ತು. ಆದರೆ ಇಂದಿನ ಶಿಕ್ಷಣದಲ್ಲಿ ಈ ಸಮಗ್ರ ಕಲ್ಪನೆಯೇ ಇಲ್ಲವಾಗಿದೆ. ಆರ್ಥಿಕ ಪ್ರಯೋಜನಕ್ಕಷ್ಟೇ ಶಿಕ್ಷಣವನ್ನು ಸೀಮಿತಗೊಳಿಸುವ ಸಂಕುಚಿತ ವಿದ್ಯಾವ್ಯವಸ್ಥೆ ಜಾರಿಯಲ್ಲಿದೆ.

ವಿಶ್ವ ಶಿಕ್ಷಣದಲ್ಲಿ ಜರ್ಮನಿಯ ಬರ್ಲಿನ್ ವಿಶ್ವವಿದ್ಯಾಲಯವು, ತಾವು ಇತರ ವಿಶ್ವವಿದ್ಯಾಲಯಗಳಿಗಿಂತ ವಿಶಿಷ್ಟ ಹಾಗೂ ಶ್ರೇಷ್ಠ ಎಂದೇ ಪ್ರತಿಬಿಂಬಿತಗೊಂಡಿದೆ. ಅಲ್ಲಿನ ತಾಂತ್ರಿಕ ಶಿಕ್ಷಣದ ಜೊತೆಗೆ ಸಮಾಜಶಾಸ್ತ್ರೀಯ ಶಾಖೆಗಳ ಮಾನವಿಕ ವಿಭಾಗದ ಕೋರ್ಸುಗಳನ್ನು ಸಂಯೋಜನೆಗೊಳಿಸಲಾಗಿದೆ. ನೊಬೆಲ್ ಪ್ರಶಸ್ತಿ ಪಡೆದ ಸಾಹಿತಿಗಳು, ಸಂಗೀತ ವಿದ್ವಾಂಸರು, ಪರಿಸರ ವಿಜ್ಞಾನಿಗಳು ಇದ್ದಾರೆ
ಎಂದು ಜಗತ್ತಿಗೆ ತೋರಿಸುವ ಸಾಂಸ್ಥಿಕವಾದ ಅಹಂ ಅದಕ್ಕಿದೆ. ಹಾರ್ವರ್ಡ್, ಪ್ರಿನ್ಸ್‌ಟನ್, ಮೈಚಸ್ಟೆನ್, ಶಿಕಾಗೋ ಮೊದಲಾದ ವಿಶ್ವವಿದ್ಯಾಲಯಗಳು ಅರ್ಥಶಾಸ್ತ್ರ, ತತ್ವಶಾಸ್ತ್ರ, ಭಾಷಾಶಾಸ್ತ್ರ, ದಕ್ಷಿಣ ಏಷಿಯಾ ಪ್ರಾದೇಶಿಕ ಅಧ್ಯಯನಗಳು ಮೊದಲಾದ ಕೆಲವೊಂದು ಸಮಾಜ ವಿಜ್ಞಾನ ಶಾಖೆಗಳ ಜೊತೆಗೆ ಥಿಯರೆಟಿಕಲ್ ಫಿಸಿಕ್ಸ್, ಅಸ್ಟ್ರಾನಮಿ, ಸ್ಟ್ರಕ್ಚರಲ್ ಫಿಸಿಕ್ಸ್ ಮುಂತಾದ ಮೂಲ ವಿಜ್ಞಾನ ಶಾಖೆಗಳಿಗೆ ಜಗತ್ತಿನಲ್ಲೇ ಪ್ರಸಿದ್ಧವಾಗಿವೆ. ಎಲ್ಲ ವಿದ್ಯಾಶಾಖೆಗಳಿಗೂ ಅಲ್ಲಿ ಪ್ರಾಮುಖ್ಯತೆಯನ್ನು ಕೊಡಲಾಗುತ್ತದೆ.

ಪಾಶ್ಚಾತ್ಯ ದೇಶಗಳಲ್ಲಿ ವೃತ್ತಿಪರ ಶಿಕ್ಷಣಕ್ಕೆ ಸೇರಲು ಬಯಸುವ ವಿದ್ಯಾಕಾಂಕ್ಷಿ ಅರ್ಹತೆ ಪಡೆಯಲು ಒಂದು ಸೆಮಿಸ್ಟರ್ ಅನ್ನು ಸಮಾಜವಿಜ್ಞಾನ ಕ್ಷೇತ್ರದಲ್ಲೋ, ಮಾನವಿಕ ವಿಭಾಗದಲ್ಲೋ, ಲಲಿತಕಲೆಗಳಲ್ಲೋ ಅಥವಾ ತತ್ತ್ವಶಾಸ್ತ್ರ ಮನಃಶಾಸ್ತ್ರಗಳಲ್ಲೋ ಮುಗಿಸುವುದು ಕಡ್ಡಾಯವಾಗಿದೆ.ದುರ್ದೈವದ ಸಂಗತಿಯೆಂದರೆ, ನಮ್ಮ ದೇಶದಲ್ಲಿ ಸರ್ಕಾರ, ವಿಶ್ವವಿದ್ಯಾಲಯಗಳ ಕುಲಪತಿಗಳು, ಸಿಂಡಿಕೇಟ್ ಸದಸ್ಯರುಗಳೇ ಸಮಾಜವಿಜ್ಞಾನ, ಚರಿತ್ರೆ, ಸಾಹಿತ್ಯ ತತ್ತ್ವಶಾಸ್ತ್ರ ಮುಂತಾದ ಮೂಲ ವಿಜ್ಞಾನ ವಿಭಾಗಗಳನ್ನು ಸಂಪೂರ್ಣ ಮುಚ್ಚುವ ಧೋರಣೆಯನ್ನು ವ್ಯಕ್ತಪಡಿಸುತ್ತಾರೆ. ದಕ್ಷಿಣ ಕನ್ನಡದ ವೃತ್ತಿಪರ ಶಿಕ್ಷಣ ಸಂಸ್ಥೆಗಳು ಮೂಲ ಜ್ಞಾನಶಾಖೆಗಳ ಬಗ್ಗೆ - ಸಾಹಿತ್ಯ, ಭಾಷೆಗಳ ಬಗ್ಗೆ ತಾಳುವ ನಿಲುವುಗಳು ಅತ್ಯಂತ ನಿರಾಶಾದಾಯಕವಾಗಿವೆ. ಮೂಲ ವಿಜ್ಞಾನ, ಸಮಾಜ ವಿಜ್ಞಾನ ಶಾಖೆಗಳಿಗೆ ಇನ್ನು ಭವಿಷ್ಯವಿಲ್ಲ. ಎಂಜಿನಿಯರಿಂಗ್, ಮೆಡಿಕಲ್, ಕಂಪ್ಯೂಟರ್‌ನಿಂದ ಮಾತ್ರ ಏಳಿಗೆ ಸಾಧ್ಯವೆಂಬಂತೆ ಇಡೀ ಶಿಕ್ಷಣ ವ್ಯವಸ್ಥೆ ರೂಪಿತಗೊಳ್ಳುತ್ತದೆ, ವಿದೇಶಗಳಲ್ಲಿ ಕೇವಲ ಒಬ್ಬ ವಿದ್ಯಾರ್ಥಿಗಾಗಿ ಒಂದು ಜ್ಞಾನ ವಿಭಾಗವನ್ನೇ ಹೊಸದಾಗಿ ಆರಂಭಿಸಿದ ನಿದರ್ಶನಗಳಿವೆ.

ಉನ್ನತ ಶಿಕ್ಷಣ ಎಲ್ಲರಿಗೂ, ಎಲ್ಲೆಡೆ ಈ ಘೋಷಣೆಯಲ್ಲಿ ಒಂದು ಪ್ರಜಾಸತ್ತಾತ್ಮಕವಾದ ಕನಸಿದೆ. ಒಂದು ಆದರ್ಶವಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಮೇಲಿನ ಘೋಷ ವಾಕ್ಯವನ್ನು ಇಂಡಿಯಾದಂತ ವಿಶಾಲ ದೇಶದ ಶ್ರೇಣೀಕೃತ ಜಾತಿವ್ಯವಸ್ಥೆ, ಅಸ್ಪೃಶ್ಯತೆ, ಸಾಮಾಜಿಕವಾದ ಸಂಕೀರ್ಣ ಅಸಮಾನತೆ, ಮತೀಯ ಮೂಲಭೂತವಾದ, ಬಹು ಬಗೆಯ ಅಧಿಕಾರದ ದಬ್ಬಾಳಿಕೆ ಮುಂತಾದ ಮಿಶ್ರ ಪರಿಸ್ಥಿತಿಯ ಒಳಗೆ ಇಟ್ಟು ನೋಡಬೇಕು.

ಒಂದು ವರ್ಷಕ್ಕೆ ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರ ವಿದ್ಯಾರ್ಥಿಗಳನ್ನು ಹೊಂದಿರುವ ಈ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹೆಚ್ಚಿನವರು ಬಡತನದ ಕಾರಣದಿಂದ ನೇರ ಶಿಕ್ಷಣದಿಂದ ವಂಚಿತರಾದವರು. ತಮ್ಮ ಭವಿಷ್ಯ ಶಿಕ್ಷಣದ ಕಾರಣದಿಂದ ಬದಲಾಗುತ್ತದೆ ಎಂಬ ಭರವಸೆ ಹೊತ್ತವರು. ಬಡ್ತಿಗಾಗಿ, ಓದು ಮುಂದುವರಿಸುವವರು. ನಿವೃತ್ತಿ ಹೊಂದಿ ಆತ್ಮ ಸಂತೋಷಕ್ಕಾಗಿ ಓದುವವರು
ಏನನ್ನಾದರೂ ಸಾಧಿಸಬೇಕೆಂಬ ಇಚ್ಛೆಯಿಂದ ಓದುತ್ತಿರುವ ಗೃಹಿಣಿಯರು ಇಂಥವರು ಮುಕ್ತ ವಿಶ್ವವಿದ್ಯಾನಿಲಯದ ವಿದಾರ್ಥಿಗಳು.
ಈ ದೃಷ್ಟಿಯಿಂದ ಬದುಕಿನ ಬಗ್ಗೆ ಒಳನೋಟಗಳುಳ್ಳ ವಿಶಾಲದರ್ಶನ, ಮೌಲ್ಯಾಧಾರಿತ ಜೀವನದಲ್ಲಿ ವಿಶ್ವಾಸ ಮೂಡಿಸುವ ಲಿಬರಲ್ ಶಿಕ್ಷಣ ಅತ್ಯಂತ ಅವಶ್ಯವಾಗಿದೆ.

ಮೂಲ ಸಾಮಾಜಿಕ ವಿಜ್ಞಾನ ಶಾಖೆಗಳಾದ ಸಮಾಜಶಾಸ್ತ್ರ, ಚರಿತ್ರೆ, ರಾಜಕೀಯಶಾಸ್ತ್ರ, ಅರ್ಥಶಾಸ್ತ್ರ, ಸಾಹಿತ್ಯ, ತತ್ತ್ವಶಾಸ್ತ್ರ, ಭಾಷಾಶಾಸ್ತ್ರ, ಕಲೆ, ಲಲಿತಕಲಾಶಾಸ್ತ್ರ ಮತ್ತು ಮೂಲ ವಿಜ್ಞಾನ ಶಾಖೆಗಳಾದ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ ಮೊದಲಾದ ಲಿಬರಲ್ ವಿದ್ಯಾ ಶಾಖೆಗಳು ಬದುಕಿನ ನೈಜ ಸತ್ವ ದರ್ಶನ ಮಾಡಿಸುತ್ತವೆ. ಬೌದ್ಧಿಕ ಗುಣಮಟ್ಟವನ್ನು ಹುಟ್ಟಿಸುತ್ತವೆ. ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಅವರಿಗೆ ಅಂಥ ಆದರ್ಶ ಕನಸುಗಳಿದ್ದುದರಿಂದಲೇ ಅವರು ಮೂಲ ಜ್ಞಾನ ಶಾಖೆಗಳ ಲಿಬರಲ್ ಶಿಕ್ಷಣಕ್ಕೆ ಅಷ್ಟೊಂದು ಮಹತ್ವ
ಕೊಟ್ಟಿದ್ದರು

Courtesy: Prajavani, May 31, 2013

Copyright © 2013 amuct.org. All Rights Reserved | Powered by eCreators
Home | News | Sitemap | Contact

Contact Us

OFFICE:
AMUCT, I Floor, Nithyananda Complex,
A.S.R.P. Road,
Near Nava Bharath Circle,
Kodialbail, Mangalore- 575 003

 

E-Mail: This email address is being protected from spambots. You need JavaScript enabled to view it.
E-Mail: This email address is being protected from spambots. You need JavaScript enabled to view it.