ನಿರಂಜನ ವಾನಳ್ಳಿ

ಇಂದಿನ ಪತ್ರಿಕೆಗಳಲ್ಲಿ (6-6-2013) ಓದಿದ ಒಂದು ಸುದ್ದಿ ಅಚ್ಚರಿಯದಾಗಿತ್ತು. ಅದು- ಚರಿತ್ರೆಯ ಉಪನ್ಯಾಸಕರುಗಳು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿಯ ಮುಂದೆ ಬಂದು ತಮಗೂ ಮೌಲ್ಯಮಾಪನ ಮಾಡುವ ಅವಕಾಶ ಬೇಕೆಂದು ಗಲಾಟೆ ಮಾಡಿದ್ದಕ್ಕೆ ಸಂಬಂಧಿಸಿದ್ದು. 



ವಿಚಿತ್ರವಾಗಿ ಕಾಣುವುದೆಂದರೆ ಇವರ್ಯಾರೂ ಮುಕ್ತ ವಿಶ್ವವಿದ್ಯಾನಿಲಯದ ಅಧ್ಯಾಪಕರುಗಳಲ್ಲ. ಬೇರೆ ಬೇರೆ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವವರು. ಇವರು ಯಾಕೆ ಮೌಲ್ಯಮಾಪನದಿಂದ ಸಿಗುವ ಕಾಸಿಗಾಗಿ ಹಪಹಪಿಸಿದರು? ಮುಕ್ತ ವಿವಿ ಇವರನ್ನು ಮೌಲ್ಯಮಾಪನಕ್ಕೆ ಆಹ್ವಾನಿಸಿಲ್ಲ. ಸ್ವತಂತ್ರ ಅಸ್ತಿತ್ವ ಹೊಂದಿರುವ ಈ ಸಂಸ್ಥೆಗೆ ಯಾರನ್ನು ಮೌಲ್ಯಮಾಪನಕ್ಕೆ ಕರೆಯಬೇಕು, ಯಾರನ್ನು ಕರೆಯಬಾರದು ಎಂದು ನಿರ್ಧರಿಸುವ ಹಕ್ಕಿದೆ. ಈ ಮೇಷ್ಟ್ರುಗಳು ಕರೆಯದೇ ಅಲ್ಲಿಗೆ ಬಂದವರು ಹಾಗೂ ತಮಗೂ ಮೌಲ್ಯಮಾಪನದ ಅವಕಾಶ ಬೇಕೆಂದು ಬೇಡುತ್ತಿದ್ದವರು! ನನಗೆ ತತ್‌ಕ್ಷಣ ನೆನಪಾದುದು ಯಾರಧ್ದೋ ಮದುವೆ ನಡೆಯುವಾಗ ಕಲ್ಯಾಣಮಂಟಪಗಳೆದರು ಅನ್ನಕ್ಕಾಗಿ ಕೈಯೊಡ್ಡುವವರು. ಮೌಲ್ಯಮಾಪನಕ್ಕೆ ಹಣವಿಲ್ಲವೆಂದು ಘೋಷಿಸಿಬಿಡಲಿ, ಎಷ್ಟು ಜನ ಈ ಮೇಷ್ಟ್ರುಗಳು ಬಂದು ಮೌಲ್ಯಮಾಪನ ಮಾಡುತ್ತೇವೆಂದು ಹಕ್ಕೊತ್ತಾಯ ಮಾಡುತ್ತಾರೋ ನೋಡಿಬಿಡೋಣ. ಕರೆಯದೇ ಹೋಗಿ ತಮ್ಮನ್ನು ಕರೆಯಬೇಕೆಂದು ಒತ್ತಾಯ ಮಾಡುವ ಮಟ್ಟಕ್ಕೆ, ಅದೂ ಸಿಟ್ಟಿನಿಂದ ಅಲ್ಲಿನ ಕಚೇರಿಯ ಕಾಗದ ಪತ್ರಗಳನ್ನು ಹರಿದು ಬಿಸಾಕುವ ಮಟ್ಟಕ್ಕೆ, ನಮ್ಮ ವಿದ್ಯಾವಂತ ಅಧ್ಯಾಪಕರು ಇಳಿಯುತ್ತಾರೆಂದರೆ ನಂಬಲಾಗುತ್ತಿಲ್ಲ. 

ಸ್ನೇಹಿತರೊಬ್ಬರು ನಿನ್ನೆ ಬೆಂಗಳೂರಿನಿಂದ ಫೋನು ಮಾಡಿದ್ದರು. ಅವರ ಮಗಳು ಈ ವರ್ಷ ಹತ್ತನೇ ತರಗತಿ ತೇರ್ಗಡೆ ಹೊಂದಿ ಪಿಯುಸಿಗೆ ಸೇರಿದ್ದಾಳೆ. ಪಿಯುಸಿ ಅನಂತರ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ತೆಗೆದುಕೊಳ್ಳುವುದಾದರೆ ಈಗಿನಿಂದಲೇ ಟ್ಯೂಷನ್ನಿಗೆ ಹೋಗಬೇಕು. ಅವಳು ಮುಂದೆ ಎಂಜಿನಿಯರಿಂಗೋ ಮೆಡಿಕಲ್ಲೋ ತೆಗೆದುಕೊಳ್ಳುವುದಿದ್ದರೆ ಮಾತ್ರ ಸಿಇಟಿ ತೆಗೆದುಕೊಳ್ಳಬೇಕು, ಇಲ್ಲವಾದರೆ ಯಾಕೆ? ಅದಕ್ಕೇ ಏನು ಮಾಡುವುದೆಂದು ತಲೆಬಿಸಿಯಾಗಿ ಆಕೆ ಕರೆ ಮಾಡಿದ್ದು. ಮುಂದಿನ ವರ್ಷ ಪ್ರವೇಶ ಬೇಕಾದರೆ ಈ ವರ್ಷವೇ, ಅಂದರೆ ಮೊದಲ ಪಿಯುಸಿಯಲ್ಲೇ ಟ್ಯೂಷನ್ನಿಗೆ ಕಳಿಸಬೇಕು (ಇನ್ನೆರಡು ದಿನಗಳಾದರೆ ಟ್ಯೂಷನ್‌ ಅಂಗಡಿಯ ಬಾಗಿಲು ಮುಚ್ಚುತ್ತದೆ! ಹಿಂದಿನ ಬಾಗಿಲಿನಿಂದ ಪ್ರವೇಶವಿರುವುದು ಬೇರೆ). ಈ ವೃತ್ತಿಪರ ಕೋರ್ಸುಗಳಿಗೆ ಹೋಗಲು ಮಕ್ಕಳು ಟ್ಯೂಷನ್ನಿಗೆ ಹೋಗಲೇ ಬೇಕಾ? ಟ್ಯೂಷನ್ನಿಗೆ ಹೋಗದೇ ಒಳ್ಳೆಯ ಅಂಕಗಳನ್ನು ತೆಗೆಯುವುದು ಸಾಧ್ಯವೇ ಇಲ್ಲವಾ? ರಾಜ್ಯದ ಬಹುಸಂಖ್ಯಾಕ ಪಾಲಕರು ಈ ಹಂತದಲ್ಲಿ ಎದುರಿಸುವ ಪ್ರಶ್ನೆ ಹಾಗೂ ಸಂಕಟವನ್ನೇ ಆಕೆ ನನ್ನೆದುರು ತೋಡಿಕೊಂಡಳು. ಬಹಳ ವರ್ಷಗಳಿಂದ ನನ್ನನ್ನು ಕಾಡುತ್ತಿರುವ ಪ್ರಶ್ನೆಯೂ ಇದೇ ಆಗಿದೆ. ವಿಷಾದವೆಂದರೆ ಒಳ್ಳೆಯ ಮಾರ್ಕು ತೆಗೆಯಲು ಟ್ಯೂಷನ್ನಿಗೆ ಹೋಗುವುದು ಅನಿವಾರ್ಯವಲ್ಲ ಎಂಬುದು ಎಲ್ಲ ಪಾಲಕರಿಗೂ ಗೊತ್ತಿರುವ, ಆದರೆ ಯಾರೂ ಪ್ರವಾಹದ ವಿರುದ್ಧ ಈಜಲು ಬಯಸದ ಸತ್ಯ. ಪಾಲಕರ ಭಯದಲ್ಲಿ ಬಂಗಾರದ ಗಣಿಯನ್ನೇ ಕಂಡಿರುವ ಮೇಷ್ಟ್ರುಗಳು ಸೃಷ್ಟಿಸಿರುವ ಮಾಯೆ- ಈ ಟ್ಯೂಷನ್ನು! 

ನನ್ನ ಸನಿಹದ ಬಂಧುವೊಬ್ಬ ಈ ವರ್ಷ ಶಿರಸಿ ಕಾಲೇಜಿನಲ್ಲಿ ಓದಿ ಶೇ.97 ಪಡೆದಿದ್ದಾನೆ. ಗಣಿತ ಹಾಗೂ ಸಂಖ್ಯಾಶಾಸ್ತ್ರದಲ್ಲಿ ಅವನಿಗೆ ನೂರಕ್ಕೆ ನೂರು. ಕೇವಲ ಕಾಲೇಜಿನಲ್ಲಿ ಅಧ್ಯಾಪಕರ ಪಾಠ ಕೇಳಿ, ಅವನ ಪಾಡಿಗೆ ಅವನು ಓದಿಕೊಂಡು ಗಳಿಸಿರುವ ಅಂಕಗಳಿವು. ಈ ಹಳ್ಳಿ ಹುಡುಗನ ಸಾಧನೆಯಲ್ಲಿ ಮೇಲಿನ ಪ್ರಶ್ನೆಗೆ ಉತ್ತರ ಅಡಗಿದೆ. ನಿಜ ಎಲ್ಲರೂ ಒಂದೇ ಅಲ್ಲ. ಟ್ಯೂಷನ್‌ ಸೃಷ್ಟಿಸುವ ಭ್ರಮೆಯಿಂದ ಹೊರಬರಲು ಎಲ್ಲರಿಗೂ ಧೈರ್ಯವಾಗುವುದಿಲ್ಲ. ಅದಕ್ಕಾಗಿ ಟ್ಯೂಷನ್‌ ಅಂಗಡಿಯಲ್ಲಿ ಸೀಟು ಪಡೆಯುವ ಸಾಧ್ಯತೆ ಇರುವವರಿಗೆಲ್ಲ ಟ್ಯೂಷನ್‌ ಅನಿವಾರ್ಯವಾಗುತ್ತದೆ! ಅದಿಲ್ಲವಾದರೆ ಅವರಿಗೆ ಜಗತ್ತೇ ಮುಳುಗಿಹೋಗುತ್ತದೆ! ಎಲ್ಲರ ಅಮ್ಮಂದಿರೂ ನಿರ್ಧಾರ ಮಾಡಿ ಟ್ಯೂಷನ್ನಿಗೆ ಸೇರಿಸಿಯಾಗಿದೆ. ನೀನು ಮಾತ್ರ ನನ್ನ ಭವಿಷ್ಯದ ಬಗ್ಗೆ ಏನೂ ಚಿಂತೆ ಮಾಡುತ್ತಿಲ್ಲ ಎಂಬುದು ಬೆಂಗಳೂರಿಂದ ಫೋನಾಯಿಸಿ ತನ್ನ ಆತಂಕವನ್ನು ಹಂಚಿಕೊಂಡ ತಾಯಿಯ ಮಗಳ ವರಾತ. 

ಬೆಳಿಗ್ಗೆ ಐದಕ್ಕೆ ಟ್ಯೂಷನ್‌ ಮನೆಯ ಬಾಗಿಲು ತೆಗೆಯುವುದನ್ನೇ ಕಾಯುವ ಮಕ್ಕಳನ್ನು, ರಾತ್ರಿ ಹತ್ತಕ್ಕೆ ಟ್ಯೂಷನ್ನು ಮುಗಿಸಿ ಹೊರಬರುವ ಮಗಳನ್ನು ಕಾಯುವ ಪಾಲಕರನ್ನು ದಿನನಿತ್ಯ ಕಾಣುತ್ತೇನೆ. ಮಳೆ ಬರಲಿ, ಛಳಿಯಲ್ಲಿ ಥರಗುಟ್ಟುತ್ತಿರಲಿ, ಯಾರೋ ದೊಡ್ಡ ಜನ ಢಮಾರ್‌ ಎಂದು ಕಾಲೇಜಿಗೆ ರಜೆ ಸಿಕ್ಕರೂ ಈ ಮಕ್ಕಳು ಟ್ಯೂಷನ್ನಿಗೆ ಹೋಗುವುದು ತಪ್ಪುವುದಿಲ್ಲ. ಅವರಿಗೆಲ್ಲ ಕಾಲೇಜಿನ ಪಾಠ ಲೆಕ್ಕಕ್ಕಿಲ್ಲ. ಟ್ಯೂಷನ್ನಿಗೆ ಸರಿಯಾಗಿ ಹೋಗಿಬಿಟ್ಟರೆ ನೂರಕ್ಕೆ ನೂರು ಬರುತ್ತೆ ಎಂಬ ನಂಬುಗೆ. ನಾವೇನೋ ಒಳ್ಳೆಯ ಕಡೆ ಟ್ಯೂಷನ್ನಿಗೆ ಸೇರಿಸಿದ್ದೇವೆ. ಮಾರ್ಕು ತೆಗೆಯುವುದು ನಿನ್ನದು, ಎಂದು ಪಾಲಕರು ಮಕ್ಕಳಿಗೆ ಎಚ್ಚರಿಸುವುದು ಎಲ್ಲರ ಮನೆಯಿಂದ ಕೇಳಿಬರುವ ಮಾತು. ಇದು ಪಾಲಕರ ಪಲಾಯನವಾದವೂ ಹೌದು. ಅಪ್ಪಿ ತಪ್ಪಿ$ಮಕ್ಕಳಿಗೆ ನಿರೀಕ್ಷಿತ ಅಂಕಗಳು ಬರದಿದ್ದರೆ... ಇಷ್ಟು ಹಣ ಸುರಿದು ಟ್ಯೂಷನ್ನಿಗೆ ಸೇರಿಸಿದರೂ ಇಷ್ಟೇನಾ ಮಾರ್ಕು ತೆಗೆದದ್ದು ಶನಿ ಎಂದು ವ್ಯಂಗ್ಯವಾಡುವುದು- ಬಯ್ಯುವುದು ಬಹುತೇಕ ಮಕ್ಕಳ ಅನುಭವ. ಇನ್ನು ಮಕ್ಕಳು ಕೂಡ ಟ್ಯೂಷನ್ನು ನೀಡುವವರನ್ನು ಹೇಗೆ ಗ್ರಹಿಸುತ್ತಾರೆ ಎಂಬುದು ಕುತೂಹಲಕರವಾಗಿದೆ. 'ಇಷ್ಟು ದುಡ್ಡು ಪೀಕಿದ್ದೇನೆ, ನನಗೆ 90ರ ಮೇಲೆ ಬರುವಂತೆ ಮಾಡುವುದು ಅವನ ಜವಾಬ್ದಾರಿ' ಎಂದು ಟ್ಯೂಷನ್ನಿನವರಿಂದ ಮಕ್ಕಳ ನಿರೀಕ್ಷೆ. ಟ್ಯೂಷನ್‌ ಮೇಷ್ಟ್ರುಗಳೆಂದರೆ ತಾನು ಅಷ್ಟು ದುಡ್ಡು ಕೊಟ್ಟಿರುವುದರಿಂದ ತನ್ನ ಪರವಾಗಿ ಓದುವವರು, ಹಳೆಯ ಪ್ರಶ್ನೆಪತ್ರಿಕೆಗಳನ್ನು ಹುಡುಕಿ ಉತ್ತರಗಳನ್ನು ಕಂಡುಹಿಡಿಯುವವರು ಎಂದೇ ವಿದ್ಯಾರ್ಥಿಗಳು ಭಾವಿಸುವಂತಿದೆ. ಕಾರು ಬೈಕುಗಳಲ್ಲಿ ಜುಮ್ಮೆಂತ ಬರುವ ವಿದ್ಯಾರ್ಥಿಗಳೆದುರು ಹಣ ಪಡೆದು ಮನೆಪಾಠ ಮಾಡುವ ಮೇಷ್ಟ್ರು ಸಣ್ಣವನಾಗಿಬಿಡುತ್ತಾನೆ ಎಂಬುದು ವಿಷಾದನೀಯ ಅಂಶ. 

ಈ ಹಂತದಲ್ಲಿ ಕಲಿತ ಕಾಲೇಜಿನ ಪ್ರಸ್ತಾಪವೇ ಆಗದಿರುವುದು ಸೋಜಿಗ. ಅದಕ್ಕಾಗಿಯೇ ಈಗ ಪ್ರತಿಷ್ಠಿತ ಕಾಲೇಜುಗಳಲ್ಲಿ ಕೂಡ ಪಿಯುಸಿ ಕ್ಲಾಸುಗಳು ನಡೆಯುವುದು ಲೆಕ್ಕಕ್ಕಷ್ಟೇ ಎಂಬಂತಾಗಿಬಿಟ್ಟಿದೆ. 'ಹೇಗೂ ನೀವು ಟ್ಯೂಷನ್ನಿಗೆ ಹೋಗುತ್ತಿರಲ್ಲಾ' ಎಂದು ಮೇಷ್ಟ್ರುಗಳು ಉಪೇಕ್ಷೆ ಮಾಡುತ್ತಾರೆ ಅಥವಾ 'ಇಲ್ಲಿ ಕಲಿಸಲಿಕ್ಕೆ ಆಗುವುದಿಲ್ಲ, ಟ್ಯೂಷನ್ನಿಗೆ ಬಾ ಹೇಳಿಕೊಡುತ್ತೇನೆ' ಎಂದು ಮೇಷ್ಟ್ರುಗಳೇ ನಾಚಿಕೆಬಿಟ್ಟು ಪುಸಲಾಯಿಸುತ್ತಾರೆ. ಟ್ಯೂಷನ್ನಿಗೆ ಹೋಗದವರನ್ನು ಅತ್ಯಂತ ನಿಕೃಷ್ಟ ಹುಳುಗಳ ರೀತಿ ನೋಡುತ್ತಾರೆ ಎಂದು ಅನೇಕ ವಿದ್ಯಾರ್ಥಿಗಳು ಹೇಳುವುದನ್ನು ಕೇಳಿದ್ದೇನೆ. ಹೀಗಾಗಿ ಅದೆಷ್ಟೋ ಸಾವಿರ ಡೊನೇಶನ್‌ ಪಡೆದು ಸೀಟುಕೊಡುವ ಕಾಲೇಜುಗಳಲ್ಲಿ ಕೂಡ ಪಿಯುಸಿ ಪಾಠವೆಂದರೆ ಉಪೇಕ್ಷೆ. ತಮ್ಮ ಕಾಲೇಜಿನ ಕೆಲವು ಮೇಷ್ಟ್ರುಗಳು ತಾವು ಕೊಡುವ ಸಂಬಳಕ್ಕಿಂತ ಟ್ಯೂಷನ್‌ನಿಂದ ಹೆಚ್ಚು ಹಣ ಸಂಪಾದಿಸುವುದು, ಇದರಿಂದ ಅವರ ಕಾಲೇಜು ಪಾಠದ ಮೇಲೆ ಪರಿಣಾಮ ಬೀರುತ್ತಿರುವುದು ಕಾಲೇಜುಗಳಿಗೆ ಗೊತ್ತಿದ್ದೂ ಅವರು ಆಕ್ಷೇಪಿಸುವುದಿಲ್ಲ. ಯಾಕೆಂದರೆ ಮೇಷ್ಟ್ರುಗಳನ್ನು ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳುವ ಪಾಪಪ್ರಜ್ಞೆ ಅವರಿಗೆ ಕಾಡುತ್ತದೆ! ಒಟ್ಟಾರೆ ಇದೊಂದು ವಿಷ ವರ್ತುಲವಾಗಿ ಮಕ್ಕಳು ಚಕ್ರವ್ಯೂಹಲ್ಲಿ ಸಿಲುಕಿಕೊಳ್ಳುವ ಅಭಿಮನ್ಯುಗಳಾಗಿದ್ದಾರೆ. ಇಷ್ಟಾಗಿ ಟ್ಯೂಷನ್ನಿಗೆ ಹೋಗಿದ್ದರಿಂದಲೇ ಮಕ್ಕಳಿಗೆ ಹೆಚ್ಚು ಅಂಕ ಬಂತು, ಇಲ್ಲವಾದರೆ ಕಡಿಮೆಯಾಗುತ್ತಿತ್ತು ಎಂಬುದಕ್ಕಾಗಲೀ, ಮಕ್ಕಳು ಪಡೆದ ಅಂಕಗಳಲ್ಲಿ ಅವರ ಪಾತ್ರ ಎನು ಇಲ್ಲ, ಅದರ ಶ್ರೇಯಸ್ಸು ಟ್ಯೂಷನ್ನು ಹೇಳಿಕೊಟ್ಟವರಿಗೆ ಹೋಗಬೇಕು ಎಂಬುದಕ್ಕಾಗಲೀ, ಎಲ್ಲಿಯಾದರೂ ಆಧಾರವಿದೆಯೇ- ನನಗೆ ಗೊತ್ತಿಲ್ಲ. 

ನನ್ನ ಆಕ್ಷೇಪ ವೃತ್ತಿಯ ಪಾಠವನ್ನು ಕಡೆಗಣಿಸಿ ಮನೆಪಾಠ ಮಾಡುವವರ ಬಗ್ಗೆ ಮಾತ್ರ. ಈಗ ಗಣಿತವೋ, ಫಿಸಿಕೊÕà ಎಂಎಸ್ಸಿ ಮಾಡಿ ಕೆಲಸ ಸಿಕ್ಕದೇ ಟ್ಯೂಷನ್ನನ್ನು ಒಂದು ವೃತ್ತಿಯಾಗಿ ಸ್ವೀಕರಿಸಿ ಪ್ರಾಮಾಣಿಕವಾಗಿ ನಡೆಸುವ ಅದೆಷ್ಟೋ ಜನರಿದ್ದಾರೆ ಎಂಬುದನ್ನು ಬಲ್ಲೆ. ಅದು ಅವರ ವೃತ್ತಿ ಮತ್ತು ಹಕ್ಕು. ಆದರೆ ಯಾವುದೋ ಕಾಲೇಜಲ್ಲಿ ಹೆಸರಿಗೆ ಆಧ್ಯಾಪಕರಾಗಿದ್ದುಕೊಂಡು ಅಲ್ಲಿ ಬೇಕಾಬಿಟ್ಟಿ ಪಾಠ ಮಾಡುತ್ತಾ, ಬೇಕಾದರೆ ಟ್ಯೂಷನ್ನಿಗೆ ಬನ್ನಿ ಎಂದು ಪುಸಲಾಯಿಸುವ ನೀಚತನಕ್ಕೆ ನನ್ನ ಆಕ್ಷೇಪ. ಬೆಳಿಗ್ಗೆ ಐದರಿಂದ ಶುರುಮಾಡಿ ರಾತ್ರಿ ಹತ್ತರವರೆಗೆ ಮಕ್ಕಳಿಗೆ ಅನ್ಯಾಯಮಾಡದೇ ಪಾಠಮಾಡುತ್ತೇನೆನ್ನುವ ಬೃಹಸ್ಪ$ತಿಯನ್ನು ನಾನು ನಂಬುವುದಿಲ್ಲ ಹಾಗೂ ಅವರು ಅದೆಷ್ಟೇ ಪ್ರಸಿದ್ಧ ಟ್ಯೂಷನ್‌ ಗುರುವಾಗಿದ್ದರೂ ಒಬ್ಬ ಅಧ್ಯಾಪಕನಾಗಿ ಅವರಿಗೆ ಧಿಕ್ಕಾರವೆನ್ನುತ್ತೇನೆ. ನಮ್ಮ ಸರ್ಕಾರ ಹಾಗೂ ಸಮಾಜ ಮನಸ್ಸು ಮಾಡಿದರೆ ಟ್ಯೂಷನ್ನಿನ ಅಕರ್ಷಣೆಯಿಲ್ಲದೇ ತರಗತಿಯಲ್ಲೇ ಎಲ್ಲ ಮಕ್ಕಳಿಗೆ ನ್ಯಾಯಯುತ ಪಾಠಗಳು ನಡೆಯುವ ವ್ಯವಸ್ಥೆ ಸಾಧ್ಯವೇ ಇಲ್ಲವೇ? ಈ ಸಮಾಜದ ಪ್ರಜ್ಞಾವಂತರು ಉತ್ತರಿಸಲಿ.

Courtesy: Udayavani, June 8, 2013