ಬೆಂಗಳೂರು: ಉನ್ನತ ಶಿಕ್ಷಣದಲ್ಲಾಗುತ್ತಿರುವ ವಂಚನೆ ತಪ್ಪಿಸಿಕೊಳ್ಳಲು ದಲಿತರು ಪ್ರಬಲ ಹೋರಾಟ ನಡೆಸಬೇಕಿದೆ ಎಂದು ಹೈದರಾಬಾದ್‌ನ ಭಾರತೀಯ ಕಾನೂನು ಕಾಲೇಜು ಹಿರಿಯ ಉಪನ್ಯಾಸಕ ಪ್ರೊ.ಹರಿಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ. 
ದಲಿತ ಹೋರಾಟಗಾರ ದಿ.ಪ್ರೊ.ಬಿ.ಕೃಷ್ಣಪ್ಪ 75ನೇ ಜನ್ಮದಿನ ಅಂಗವಾಗಿ ಬೆಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸಭಾಂಗಣದಲ್ಲಿ ನಡೆದ ಐಕ್ಯತಾ ದಿನಾಚರಣೆಯಲ್ಲಿ ಮಾತನಾಡಿದರು. ಖಾಸಗಿ ಸಂಸ್ಥೆಗಳ ಪ್ರವೇಶ ಹೆಚ್ಚಾಗಿರುವುದರಿಂದ ಉನ್ನತ ಶಿಕ್ಷಣ ವರ್ಷದಿಂದ ವರ್ಷಕ್ಕೆ ದುಬಾರಿಯಾಗುತ್ತಿದೆ. ಇದರಿಂದ ದಲಿತರು, ಬಡವರು ಉನ್ನತ ಶಿಕ್ಷಣ ಪಡೆಯಲಾಗದೆ ಹಿಂದುಳಿಯುವಂತಾಗಿದೆ ಎಂದು ವಿಷಾದಿಸಿದರು.
 
ದಲಿತರು ತಮ್ಮ ಹಕ್ಕುಗಳಿಗೆ ಹೋರಾಡುವುದರ ಜತೆಗೆ ಉನ್ನತ ಶಿಕ್ಷಣ ಆಗುತ್ತಿರುವ ವಂಚನೆ ವಿರುದ್ಧವೂ ಹೋರಾಟ ನಡೆಸಬೇಕಿದೆ. ಏಕೆಂದರೆ, ಮೀಸಲು ಸೌಲಭ್ಯ ಇರುವುದು ಸರ್ಕಾರಿ ಸಂಸ್ಥೆಗಳಲ್ಲಿ ಮಾತ್ರ. ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಮೀಸಲು ಸೌಲಭ್ಯವೇ ಇಲ್ಲ. ಆದ್ದರಿಂದ ಖಾಸಗಿ ಸಂಸ್ಥೆಗಳ ಹೆಚ್ಚಳಕ್ಕೆ ಅವಕಾಶ ನೀಡಬಾರದು. 
ಈ ಬಗ್ಗೆ ಸರ್ಕಾರವನ್ನು ಸದಾ ನುಣುಚಿಕೊಳ್ಳುವ ಉತ್ತರ ನೀಡುತ್ತದೆ. ಆದ್ದರಿಂದ ಹಿಂದುಳಿದವರು, ದಲಿತರಿಗೆ ಇದೊಂದು ಸವಾಲು ಎಂದು ಪ್ರೊ. ಹರಿಗೋಪಾಲ್ ನುಡಿದರು. ಭಾಷಣಕಾರ ಡಾ.ರೆವರೆಂಡ್ ಮನೋಹರ್ ಚಂದ್ರಪ್ರಸಾದ್, ಡಾ.ನಟರಾಜ್ ಹುಳಿಯಾರ್, ದಸಂಸ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್, ಖಚಾಂಚಿ ಪಿ.ಎಸ್.ಭೀಮಜ್ಯೋತಿ ಸೀನು ಮತ್ತಿತರರು ಭಾಗವಹಿಸಿದ್ದರು

Courtesy: Kannada Prabha, June 14,2013