ವಿ.ವಿ.ಗಳಲ್ಲಿ ಉನ್ನತ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಬೇಕಾದ ಹಲವು ಸಂಗತಿಗಳನ್ನು ಈ ಕೆಳಕಂಡಂತೆ ಚರ್ಚಿಸಬಹುದು.


*ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ವಿಧಾನ ಬದಲಾಗಬೇಕು. ರಾಜ್ಯಮಟ್ಟದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬೇಕು. ಇದರಲ್ಲಿ ರಾಜ್ಯದ ಯಾವುದೇ ಜಿಲ್ಲೆಯ ವಿದ್ಯಾರ್ಥಿಗಳು ಭಾಗವಹಿಸುವ ಅವಕಾಶ ಕಲ್ಪಿಸಬೇಕು. ಇದರಿಂದ ತಮ್ಮ ಆಯ್ಕೆಯ ವಿ.ವಿ.ಗಳಲ್ಲಿ ವಿದ್ಯಾರ್ಥಿಗಳು ಓದುವ ಅವಕಾಶ ದೊರೆಯುತ್ತದೆ. ಅಲ್ಲದೇ, ಸ್ಪರ್ಧಾತ್ಮಕ ವಾತಾವರಣವನ್ನು ಇದು ನಿರ್ಮಾಣ ಮಾಡುತ್ತದೆ. ಇದು ಉನ್ನತ ಶಿಕ್ಷಣದ ಮಟ್ಟವನ್ನು ಹೆಚ್ಚಿಸಲು ಅನುಕೂಲವಾಗುತ್ತದೆ.

*ವಿಶ್ವವಿದ್ಯಾಲಯವೊಂದರಿಂದ ಪದವಿ ಪಡೆದವರನ್ನು ಅದೇ ವಿ.ವಿ.ಗೆ ಪ್ರಾಧ್ಯಾಪಕರನ್ನಾಗಿ ನೇಮಕ ಮಾಡುವ ಪದ್ಧತಿ ನಿಲ್ಲಬೇಕು. ಗುಣಮಟ್ಟದ ಶಿಕ್ಷಣದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂಬುದಾದರೆ ಅಖಿಲ ಭಾರತ ಮಟ್ಟದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಬೇಕು. ದೇಶದ ಯಾವುದೇ ವಿಶ್ವವಿದ್ಯಾಲಯದ ಪದವೀಧರರು ಇಲ್ಲಿ ಬೋಧಕರಾಗಿ ಬರಬಹುದು. ಐಐಟಿ, ಐಐಎಂಗಳು ಉತ್ತಮ ಫಲಿತಾಂಶ ದಾಖಲಿಸಲು ಕಾರಣವೂ ಇದೆ. ಅಲ್ಲಿನ ಪ್ರಾಧ್ಯಾಪಕರು ರಾಷ್ಟ್ರದ ವಿವಿಧ ಭಾಗಗಳಿಂದ ಬಂದಿರುತ್ತಾರೆ. ಅದೇ ರೀತಿ ವಿದ್ಯಾರ್ಥಿಗಳೂ ಒಂದೇ ರಾಜ್ಯಕ್ಕೆ ಸೇರಿದವರಿರುವುದಿಲ್ಲ.

ನಾನು ಎಂ.ಎಸ್ಸಿ ಪದವಿ (1967-69) ಓದುತ್ತಿರುವಾಗ ನನ್ನ ಸಹಪಾಠಿಗಳು ತಮಿಳುನಾಡು, ಆಂಧ್ರಪ್ರದೇಶ, ಕಾಶ್ಮೀರದವರಿದ್ದರು. ಅಂತಹ ಅವಕಾಶ ಈಗಲೂ ಇರಬೇಕು.

ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪ್ರಮುಖವಾಗಿ ಬೇಕಾದುದು ಎಲ್ಲ ವಿಭಾಗಗಳಿಗೂ ನುರಿತ ಬೋಧಕ ಸಿಬ್ಬಂದಿ. ಪ್ರತಿ ವಿಭಾಗಕ್ಕೂ 8ರಿಂದ 10 ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರನ್ನು ನೇಮಕ ಮಾಡಬೇಕು. ಪದವಿ ಹಂತದಿಂದಲೇ ಕೋರ್ಸ್‌ಗಳನ್ನು ಪರಿಷ್ಕರಣೆ ಮಾಡಬೇಕು. ಅಂತರ್‌ಶಿಸ್ತೀಯ ಹಾಗೂ ಬಹುಶಿಸ್ತೀಯ ಕೋರ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು. ಸೆಮಿಸ್ಟರ್ ಪದ್ಧತಿ ಇದೀಗ ವಿಫಲವಾಗಿದೆ. ಅದನ್ನು ಜನಪ್ರಿಯಗೊಳಿಸಲು ಬೇಕಾದ ಅಗತ್ಯ ಬದಲಾವಣೆಗಳನ್ನು ತರುವ ಬಗ್ಗೆಯೂ ಉನ್ನತ ಶಿಕ್ಷಣ ಇಲಾಖೆ ಗಮನಹರಿಸಬೇಕಾಗುತ್ತದೆ.

ಸೆಮಿಸ್ಟರ್ ಪದ್ಧತಿಯನ್ನು ನಾವು ಪಾಶ್ಚಿಮಾತ್ಯರಿಂದ ಅನುಕರಣೆ ಮಾಡಿದ್ದೇವೆ. ಆದರೆ, ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಪಠ್ಯಪುಸ್ತಕ ರಚನೆ, ಪಾಠ ಬೋಧನೆ, ಪರೀಕ್ಷೆ ಹಾಗೂ ಮೌಲ್ಯಮಾಪನ ಮಾಡುವ ಪ್ರಕ್ರಿಯೆಯನ್ನು ಬೋಧಿಸುವ ಉಪನ್ಯಾಸಕರೇ ಮಾಡುತ್ತಾರೆ.

ಆದರೆ ನಮ್ಮ ವಿ.ವಿ.ಗಳು ನಡೆಸುವ ಸೆಮಿಸ್ಟರ್ ಪದ್ಧತಿಯಲ್ಲಿ ಹಾಗಿಲ್ಲ. ಪಠ್ಯಪುಸ್ತಕ ರಚನೆ ಮಾಡುವವರು, ಬೋಧಕರು, ಮೌಲ್ಯಮಾಪಕರು ಬೇರೆ ಬೇರೆ. ಇದರಿಂದಾಗಿ ಸೆಮಿಸ್ಟರ್ ಪದ್ಧತಿಯ ಬಗ್ಗೆ ನಮ್ಮಲ್ಲಿ ಅಪಸ್ವರಗಳು ಏಳುತ್ತಿವೆ.
ಅಗತ್ಯ ಬೋಧಕ ಸಿಬ್ಬಂದಿಯ ನೇಮಕದ ಜೊತೆಗೆ ಪೂರಕ ಬೋಧಕೇತರ ಸಿಬ್ಬಂದಿಯನ್ನೂ ಸರ್ಕಾರ ಅಗತ್ಯ ಪ್ರಮಾಣದಲ್ಲಿ ನೇಮಕ ಮಾಡಬೇಕು. ಈಗಾಗಲೇ ನೇಮಕವಾಗಿರುವ ಸಿ ಮತ್ತು ಡಿ ದರ್ಜೆಯ ನೌಕರರಿಗೆ ಕಂಪ್ಯೂಟರ್ ತರಬೇತಿ ನೀಡಬೇಕು. ಇದರಿಂದ ಆಡಳಿತದಲ್ಲಿ ಸುಧಾರಣೆ ತರಲು ಸಾಧ್ಯವಾಗುತ್ತದೆ.

*ಬ್ರಿಟಿಷರ ಕಾಲ ಹಾಗೂ ತದನಂತರ ನಮ್ಮಲ್ಲಿ ವಿಶ್ವವಿದ್ಯಾಲಯಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆದು ಬಂದಿವೆ. ಅಲ್ಲದೇ, ಬ್ರಿಟಿಷರು ರೂಢಿಸಿದ ಸಂಯೋಜನೆ ವ್ಯವಸ್ಥೆ (ಅಫಿಲಿಯೇಷನ್ ಸಿಸ್ಟಂ) ಇನ್ನೂ ಚಾಲ್ತಿಯಲ್ಲಿದೆ. ಇಂತಹ ವ್ಯವಸ್ಥೆಗೆ ಕಡಿವಾಣ ಹಾಕಿ, ಪ್ರತಿಯೊಂದು ಕಾಲೇಜನ್ನೂ ಸ್ವಾಯತ್ತ ಸಂಸ್ಥೆಯನ್ನಾಗಿ ಮಾಡಬೇಕು. ವಿ.ವಿ. ಸಂಯೋಜನೆಯಿಂದ ಮುಕ್ತಗೊಳಿಸಬೇಕು. ಇದಕ್ಕೆ ಬೇಕಾದರೆ, ಒಂದಷ್ಟು ವರ್ಷಗಳ ಸಮಯವನ್ನು ನೀಡಬಹುದು. ಆಯಾ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಆಶಯ, ಆಸಕ್ತಿಗೆ ತಕ್ಕಂತೆ ಪಠ್ಯಕ್ರಮಗಳನ್ನು ರೂಪಿಸಿ, ಪರೀಕ್ಷೆ ನಡೆಸಬೇಕು.

ರಾಷ್ಟ್ರಮಟ್ಟದಲ್ಲಿ ಏಕರೂಪ ಶಿಕ್ಷಣ ವ್ಯವಸ್ಥೆ ಇದರಿಂದ ಸಾಧ್ಯವೇ ಎಂಬ ಪ್ರಶ್ನೆ ಏಳಬಹುದು. ಏಕರೂಪತೆ ಅಗತ್ಯವೇನಿಲ್ಲ. ಗುಣಮಟ್ಟವನ್ನು ಕಾಯ್ದುಕೊಂಡಿದ್ದರೆ, ವಿದ್ಯಾರ್ಥಿಗಳು ತಮ್ಮ ಕೋರ್ಸ್ ಮುಗಿಸುವುದಕ್ಕೂ ಮುನ್ನವೇ ಅವರಿಗೆ ಕೆಲಸ ಖಾತ್ರಿಯಾಗಿರುತ್ತದೆ. ಅಂತಹ ಕೋರ್ಸ್‌ಗಳನ್ನು ತಯಾರು ಮಾಡುವ ಅವಕಾಶಗಳನ್ನು ಆಯಾ ಸಂಸ್ಥೆಗಳಿಗೆ ನೀಡಿದರೆ ತಪ್ಪೇನೂ ಇಲ್ಲ.

ಇದರಿಂದ ವಿ.ವಿ.ಗಳು ಸಾವಿರಾರು ಕಾಲೇಜು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪಠ್ಯಕ್ರಮ ರೂಪಿಸುವ, ಪರೀಕ್ಷೆ ನಡೆಸುವ ತಾಪತ್ರಯ ತಪ್ಪಲಿದೆ. ಏಕೆಂದರೆ ಸೆಮಿಸ್ಟರ್ ಪದ್ಧತಿ ಬಂದ ಮೇಲೆ ಪ್ರತಿ ಆರು ತಿಂಗಳಿಗೆ ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಬೇಕು. ಆದರೆ ಇದನ್ನು ನಿರ್ವಹಣೆ ಮಾಡುವ ಸಿಬ್ಬಂದಿಯ ಸಂಖ್ಯೆಯಲ್ಲಿ ಮಾತ್ರ ಏರಿಕೆ ಆಗಿಯೇ ಇಲ್ಲ. ಅದರ ಬದಲು ಆಯಾ ಕಾಲೇಜುಗಳೇ ಪಠ್ಯಕ್ರಮ ರೂಪಿಸಿ ಪರೀಕ್ಷೆ ನಡೆಸಿದರೆ ವಿ.ವಿ.ಗಳ ಮೇಲಿನ ಒತ್ತಡವೂ ತಗ್ಗಲಿದೆ. ಆಯಾ ಸಂಸ್ಥೆಯು ತನ್ನ ವಿಶಿಷ್ಟತೆ ಉಳಿಸಿಕೊಳ್ಳಲು ಸಹಾಯವಾಗುತ್ತದೆ.

ಮೇಲೆ ಚರ್ಚಿಸಿದ ಸಂಗತಿ ಶೈಕ್ಷಣಿಕ ವಿಷಯದ್ದಾಯಿತು. ಇನ್ನು ಆಡಳಿತಾತ್ಮಕವಾಗಿಯೂ ಸಾಕಷ್ಟು ಬದಲಾವಣೆಗಳು ಅಗತ್ಯ.

*ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ನೇಮಕ ಮಾಡುವಾಗ ಅವರ ಅರ್ಹತೆ, ನಾಯಕತ್ವ ಗುಣವನ್ನು ಗಣನೆಗೆ ತೆಗೆದುಕೊಳ್ಳಬೇಕು. ಅವರು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗಮನಿಸಬೇಕು. ಪ್ರಾಮಾಣಿಕತೆ, ಭಾವೈಕ್ಯ ಗುಣಗಳು ಈ ನೇಮಕಾತಿ ಸಂದರ್ಭದಲ್ಲಿ ಪ್ರಾಮುಖ್ಯ ಪಡೆಯಬೇಕು. ಆದರೆ ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಪಕ್ಷದೊಂದಿಗೆ ಒಡನಾಟವುಳ್ಳ ಹಾಗೂ ಇತರ ಪ್ರಭಾವಗಳು ಕುಲಪತಿಗಳ ನೇಮಕಾತಿಯಲ್ಲಿ ಕಾಣಬರುತ್ತಿದೆ. ಇದಕ್ಕೆ ಕಡಿವಾಣ ಬೀಳಬೇಕು.

ಕುಲಪತಿಗಳಾಗಿ ನೇಮಕ ಆಗುವವರಿಗೆ ಅತ್ಯುತ್ತಮ ನಾಯಕತ್ವ ಗುಣ ಇರಬೇಕು. ವಿ.ವಿ.ಯನ್ನು ಉನ್ನತ ಶ್ರೇಣಿಗೆ ಕೊಂಡೊಯ್ಯುವ ಅಗತ್ಯ ಮುಂದಾಲೋಚನೆ, ನಿರ್ದಿಷ್ಟ ಕಾರ್ಯಸೂಚಿ ಇರಬೇಕು.

*ಪ್ರಾಧ್ಯಾಪಕರನ್ನು ಕುಲಸಚಿವರನ್ನಾಗಿ ನೇಮಕ ಮಾಡುವ ಪ್ರಕ್ರಿಯೆಯೂ ಸಮಂಜಸವಾಗಿಲ್ಲ. ಭಾರತೀಯ ಆಡಳಿತ ಸೇವೆಯ (ಐಎಎಸ್) ಇಲ್ಲವಾದರೆ ರಾಜ್ಯಮಟ್ಟದ ಆಡಳಿತ ಸೇವೆಯ ಅಧಿಕಾರಿಗಳನ್ನು ಕುಲಸಚಿವರನ್ನಾಗಿ ಮಾಡಬೇಕು. ಇದರಿಂದಾಗಿ ಅವರು ಯಾರ ಮುಲಾಜಿಗೂ ಬೀಳದೇ ಕಟ್ಟುನಿಟ್ಟಿನ ಆಡಳಿತ ನಡೆಸಲು ಅನುಕೂಲವಾಗುತ್ತದೆ. ಮೌಲ್ಯಮಾಪನ ಕುಲಸಚಿವರಾಗಿ ನೇಮಕ ಆಗುವವರಿಗೆ ಕಂಪ್ಯೂಟರ್ ಬಳಕೆಯ ಜ್ಞಾನ ಬಹಳ ಅಗತ್ಯ.

*ಸಿಂಡಿಕೇಟ್ ಸದಸ್ಯರನ್ನು ನೇಮಕ ಮಾಡುವಾಗಲೂ ಸರ್ಕಾರ ಹಲವು ಮಾನದಂಡಗಳನ್ನು ಅನುಸರಿಸಬೇಕು. ಸಮಾಜದಲ್ಲಿ ಗೌರವಕ್ಕೆ ಪಾತ್ರರಾದವರು, ಶಿಕ್ಷಣ ತಜ್ಞರು, ಎಂಜಿನಿಯರ್‌ಗಳು, ಕಾನೂನು ತಜ್ಞರು, ವಿಜ್ಞಾನಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರನ್ನು ಸಿಂಡಿಕೇಟ್‌ಗೆ ನೇಮಕ ಮಾಡಿದರೆ ವಿ.ವಿ.ಗೂ ಗೌರವ. ಘನತೆ, ಗೌರವ, ಅನುಭವ ಇಲ್ಲದವರು ಸಿಂಡಿಕೇಟ್ ಸದಸ್ಯರಾಗುತ್ತಿರುವುದರಿಂದ ಸಮಸ್ಯೆಗಳು ಉದ್ಭವವಾಗುತ್ತವೆ. ಹಾಗೆ ನೇಮಕವಾದ ಸದಸ್ಯರಿಗೆ ಸಿಂಡಿಕೇಟ್ ಸಭೆಯಲ್ಲಿ ಗೊತ್ತುವಳಿಯನ್ನು ಮಂಡಿಸುವುದು ಕೂಡ ಗೊತ್ತಿರುವುದಿಲ್ಲ. ಇಂಥವರಿಂದ ವಿ.ವಿ.ಗೆ ಅಗತ್ಯವಿರುವ ನೀತಿ-ನಿಯಮಗಳನ್ನು ರೂಪಿಸುವುದು ಆಗುವುದಿಲ್ಲ. ಹಾಗಾಗಿ ತಜ್ಞರನ್ನು ನೇಮಕ ಮಾಡಲು ಸರ್ಕಾರ ಮುಂದಾಗಬೇಕು.

*ಎಲ್ಲ ವಿ.ವಿ., ಕಾಲೇಜುಗಳಲ್ಲಿ ಸಿಬ್ಬಂದಿಯ ಕಡ್ಡಾಯ ಹಾಜರಿಯನ್ನು ಖಾತ್ರಿಪಡಿಸಲು ಬಯೊಮೆಟ್ರಿಕ್ ವ್ಯವಸ್ಥೆಯನ್ನು ಜಾರಿ ಮಾಡಬೇಕು. ಅಷ್ಟೇ ಅಲ್ಲ; ಅದನ್ನು ಕಟ್ಟುನಿಟ್ಟಾಗಿ ನಿರ್ವಹಣೆ ಮಾಡಬೇಕು. ಆಡಳಿತ ಸುಧಾರಣಾ ಶಾಖೆಯೂ ಸೇರಿದಂತೆ ಎಲ್ಲ ವಿಭಾಗಗಳನ್ನು ಕಂಪ್ಯೂಟರೀಕರಣಗೊಳಿಸಬೇಕು. ಕೇಂದ್ರೀಕೃತ ಪ್ರವೇಶ ಪ್ರಕ್ರಿಯೆಯನ್ನು ಜಾರಿಗೆ ತರಬೇಕು.

ಸಂಶೋಧನೆಗೆ ಪ್ರೋತ್ಸಾಹ ನೀಡಲು ಪ್ರತ್ಯೇಕ `ಸಂಶೋಧನಾ ಘಟಕ'ವನ್ನೇ ಶಿಕ್ಷಣ ಸಂಸ್ಥೆಯಲ್ಲಿ ಆರಂಭಿಸಬೇಕು. ಇದಕ್ಕೆ ಅತ್ಯುತ್ತಮ ಶಿಕ್ಷಣ ಪಡೆದ ವ್ಯಕ್ತಿಯನ್ನು ನಿರ್ದೇಶಕರನ್ನಾಗಿ ನೇಮಿಸಬೇಕು.

*ಪಠ್ಯಪುಸ್ತಕ ಹಾಗೂ ಬೋಧನಾ ಕ್ರಮದಲ್ಲಿ ವ್ಯಕ್ತಿತ್ವ ವಿಕಸನ, ನಾಗರಿಕ ಪ್ರಜ್ಞೆ, ರಾಷ್ಟ್ರೀಯತೆ ಹಾಗೂ ಧಾರ್ಮಿಕ ಏಕತೆಯನ್ನು ಅಳವಡಿಸಬೇಕು.

*ಶಾಲೆಗಳು, ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು.

*ವಿಶ್ವ ವ್ಯಾಪಾರ ಒಪ್ಪಂದಕ್ಕೆ (ಡಬ್ಲ್ಯುಟಿಒ) ಭಾರತ ಸಹಿ ಹಾಕಿದ ಬಳಿಕ ವಿದೇಶಿ ಶಿಕ್ಷಣ ಸಂಸ್ಥೆಗಳು ತಮ್ಮ ಶಾಖೆಗಳನ್ನು ಇಲ್ಲಿ ಆರಂಭಿಸುತ್ತಿವೆ. ವಿದೇಶಿ ವಿ.ವಿ.ಗಳೂ ಬರಬಹುದು. ಅದು ಅನಿವಾರ್ಯ. ಅದನ್ನು ತಡೆಯುವುದು ಈ ಹಂತದಲ್ಲಿ ಸಾಧ್ಯವಿಲ್ಲ. ಅವುಗಳನ್ನು ಎದುರಿಸುವ ಒಂದು ಪ್ರಮುಖ ಮಾರ್ಗವೆಂದರೆ ನಮ್ಮ ವಿಶ್ವವಿದ್ಯಾಲಯಗಳ ಗುಣಮಟ್ಟ ಏರಿಸುವುದು. ಅದಕ್ಕೆ ನುರಿತ ಬೋಧಕ ಸಿಬ್ಬಂದಿ, ಪೂರಕ ಮೂಲಸೌಕರ್ಯಗಳು ಬೇಕಾಗುತ್ತವೆ.

ಜಿಲ್ಲೆಗೊಂದರಂತೆ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಸರ್ಕಾರದ ಕ್ರಮ ಸ್ವಾಗತಾರ್ಹವೇ ಆದರೂ, ಮೋನೊಫ್ಯಾಕಲ್ಟಿ (ಒಂದು ಪ್ರಧಾನ ವಿಷಯ) ವಿಶ್ವವಿದ್ಯಾಲಯಗಳನ್ನು ಮಾಡುವುದು ಸರಿಯಲ್ಲ. ಒಂದೇ ವಿಷಯವನ್ನು ಪ್ರಧಾನವಾಗಿಟ್ಟುಕೊಂಡು ವಿ.ವಿ.ಯೊಂದು ಆರಂಭವಾದರೆ ಅದನ್ನು `ವಿಶ್ವ'ವಿದ್ಯಾಲಯ ಎಂದು ಕರೆಯುವುದಾದರೂ ಏಕೆ?

ವಿ.ವಿ. ಎಂದ ಮೇಲೆ ಅಲ್ಲಿ ಒಂದಷ್ಟು ಅಧ್ಯಯನ ಪೀಠಗಳೂ ಇರುತ್ತವೆ. ವಿವೇಕಾನಂದ ಕೇಂದ್ರ, ಬಸವೇಶ್ವರ ಪೀಠ, ಕನಕ ಅಧ್ಯಯನ ಪೀಠ, ಗಾಂಧಿ ಅಧ್ಯಯನ ಕೇಂದ್ರ, ಅಂಬೇಡ್ಕರ್ ಅಧ್ಯಯನ ಪೀಠ ಹೀಗೆ. ಈ ಎಲ್ಲ ಮಹನೀಯರೂ ಉತ್ತಮವಾದ ಅಂಶಗಳನ್ನೇ ಹೇಳಿದ್ದಾರೆ. ಅವೆಲ್ಲವನ್ನೂ ಸೇರಿಸಿ ಒಂದು ಓಪನ್ ಎಲೆಕ್ಟಿವ್ ಕೋರ್ಸ್ (ಇತರ ಶಿಸ್ತಿನ ಆಸಕ್ತ ವಿದ್ಯಾರ್ಥಿಗಳು ಕಲಿಯುವ) ತಯಾರಿಸಬೇಕು.

ಈ ಎಲ್ಲ ಆಯಾಮಗಳೊಂದಿಗೆ ಹೇಳುವುದಾದರೆ, ವಿ.ವಿ.ಯಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಬೇಕಾದರೆ ಉತ್ತಮ, ಪಾರದರ್ಶಕ ಆಡಳಿತ, ವಿದ್ಯಾರ್ಥಿ ಸ್ನೇಹಿ ಹಾಗೂ ಸ್ಪರ್ಧಾತ್ಮಕ ಪರಿಸರ ಅಗತ್ಯ. ಪಾತಾಳಕ್ಕಿಳಿಯುತ್ತಿರುವ ವಿ.ವಿಗಳು ಹಾಗೂ ಉನ್ನತ ಶಿಕ್ಷಣದ ಮಟ್ಟವನ್ನು ಇದರಿಂದ ಮಾತ್ರ ತಡೆಯಲು ಸಾಧ್ಯವಾಗುತ್ತದೆ.

Courtesy Prajavani, June 29,2013

Copyright © 2013 amuct.org. All Rights Reserved | Powered by eCreators
Home | News | Sitemap | Contact

Contact Us

OFFICE:
AMUCT, I Floor, Nithyananda Complex,
A.S.R.P. Road,
Near Nava Bharath Circle,
Kodialbail, Mangalore- 575 003

 

E-Mail: This email address is being protected from spambots. You need JavaScript enabled to view it.
E-Mail: This email address is being protected from spambots. You need JavaScript enabled to view it.