ಜ್ಯೋತಿಬಾ ಪುಲೆಯವರು 1882ರಲ್ಲಿ ಭಾರತದಲ್ಲಿ ಶೈಕ್ಷಣಿಕ ಸ್ಥಿತಿಗಳ ಅಧ್ಯಯನಕ್ಕೆ ನೇಮಕವಾದ ವಿಲಿಯಂ ಹಂಟರ್ ನೇತತ್ವದ ಶಿಕ್ಷಣ ಆಯೋಗದ ಮುಂದೆ ಹಾಜರಾಗಿ, ಎಲ್ಲ ಮಕ್ಕಳಿಗೂ ಸರಕಾರವೇ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸಬೇಕೆಂಬ ಬೇಡಿಕೆಯನ್ನು ಸಮರ್ಥವಾಗಿ ಮಂಡಿಸಿದ್ದರು. ಈ ಎಲ್ಲ ಹೋರಾಟಗಳ ಅಂತಿಮ ಫಲವಾಗಿ 1944ರಲ್ಲಿ ಸಾರ್ಜಂಟ್ ರೂಪಿಸಿದ ವಿಸ್ತೃತ ಶಿಕ್ಷಣ ಯೋಜನೆಯಲ್ಲಿ ಮೂರರಿಂದ ಆರು ವರ್ಷದ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಆರರಿಂದ ಹದಿನಾಲ್ಕು ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸುವ ಬೇಡಿಕೆಯನ್ನು ತಾತ್ವಿಕವಾಗಿ ಅಂಗೀಕರಿಸಲಾಯಿತು. ನಂತರ ನಮ್ಮ ಸಂವಿಧಾನ ರಚನಾಕಾರರು ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಸಂವಿಧಾನದಲ್ಲಿ ಒಂದು ಕಾಲಮಿತಿ ಕಾರ್ಯಕ್ರಮವನ್ನಾಗಿ ಸೇರಿಸಿದರು.

ಸಂವಿಧಾನದ ಕಾಲಮಿತಿ ಆಶಯದಂತೆ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುವ ಕೆಲಸ 1960ಕ್ಕೆ ಮುಗಿಯಬೇಕಿತ್ತು. ಆದರೆ, ಈ ಆಶಯವನ್ನು ಹಲವು ಬಾರಿ ಮುಂದೂಡಲಾಯಿತು. ಮೊದಲಿಗೆ 1976ಕ್ಕೆ, ನಂತರ 1986ಕ್ಕೆ, 1990ಕ್ಕೆ ಮತ್ತು 'ಎಲ್ಲರಿಗೂ ಶಿಕ್ಷಣ' ಘೋಷಣೆಯ ಭಾಗವಾಗಿ 2000ದಲ್ಲಿ ಮುಗಿಯಬೇಕಿದ್ದರೂ, ಉದ್ದೇಶಿತ ಗುರಿ ಮಾತ್ರ ಈಡೇರ ಲಿಲ್ಲ. ಈ ಮಧ್ಯೆ 1993ರಲ್ಲಿ ಸರ್ವೋಚ್ಛ ನ್ಯಾಯಾಲಯವು ಶಿಕ್ಷಣವನ್ನು ಒಂದು ಮೂಲಭೂತ ಹಕ್ಕೆಂದು ಘೋಷಿಸಿದ ಹಿನ್ನಲೆಯಲ್ಲಿ, ಶಿಕ್ಷಣದ ತ್ವರಿತ ಸಾರ್ವತ್ರೀಕರಣಕ್ಕಾಗಿ ಕೇಂದ್ರ ಸರಕಾರವು ಡಿಪಿಇಪಿ ಯೋಜನೆಯನ್ನು ಜಾರಿಗೊಳಿಸಿ ತಾದರೂ ನಿರೀಕ್ಷಿತ ಫಲ ಕಾಣಲಾಗಲಿಲ್ಲ.

ಶಿಕ್ಷಣದ ಸಾರ್ವತ್ರೀಕರಣಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡಗಳು ಹೆಚ್ಚಾದ ಕಾರಣ, ಮಹತ್ವದ ಯೋಜನೆಯಾದ ಸರ್ವ ಶಿಕ್ಷಣ ಅಭಿಯಾನವನ್ನು 2001ರಿಂದ ದೇಶಾದ್ಯಂತ ಜಾರಿಗೊಳಿಸಲಾಯಿತು. ಈ ಯೋಜನೆಯು ಹಲವು ಮಹತ್ವದ ಉದ್ದೇಶಗಳನ್ನು ಹೊಂದಿತ್ತು. ಅವುಗಳೆಂದರೆ, 2003ಕ್ಕೆ ಎಲ್ಲ ಮಕ್ಕಳನ್ನೂ ಶಾಲೆಗೆ ಕರೆತರುವುದು; 2007ಕ್ಕೆ ಐದು ವರ್ಷದ ಪ್ರಾಥಮಿಕ ಶಿಕ್ಷಣವನ್ನು ಮುಗಿಸುವಂತೆ ನೋಡಿಕೊಳ್ಳುವುದು; 2010ಕ್ಕೆ ಎಂಟು ವರ್ಷದ ಎಲಿಮೆಂಟರಿ ಶಿಕ್ಷಣವನ್ನು ಮುಗಿಸುವಂತೆ ಕಾಯ್ದುಕೊಳ್ಳುವುದು; ಜತೆಗೆ, ಜೀವನಕ್ಕೆ ಪೂರಕವಾದ ತಪ್ತಿಕರ ಗುಣಾತ್ಮಕ ಶಿಕ್ಷಣವನ್ನು ಒದಗಿಸುವ ಮೂಲಕ, ಎಲ್ಲ ರೀತಿಯ ಲಿಂಗ ತಾರತಮ್ಯ ಮತ್ತು ಸಾಮಾಜಿಕ ಅಂತರಗಳನ್ನು ತೊಡೆದುಹಾಕಿ, 2010ರ ವೇಳೆಗೆ ಸಾರ್ವತ್ರಿಕ ಉಳಿಯುವಿಕೆಯನ್ನು ಸಾಧಿಸುವುದಾಗಿತ್ತು.

ಈ ಮಹತ್ವದ ಯೋಜನೆಯಂತೆ ಶಾಲೆಯಿಂದ ಹೊರಗುಳಿದ ಮತ್ತು ಶಾಲೆಯನ್ನು ಮಧ್ಯದಲ್ಲಿಯೇ ತೊರೆದ ಮಕ್ಕಳನ್ನೂ ಒಳಗೊಂಡಂತೆ ಆರರಿಂದ 14 ವರ್ಷದ ಎಲ್ಲ ಮಕ್ಕಳನ್ನೂ ಮುಖ್ಯವಾಹಿನಿಗೆ ತರುವ ಕಾರ್ಯ ಉದ್ದೇಶಕ್ಕನುಗುಣವಾಗಿ 2003ಕ್ಕೆ ಮುಗಿಯಬೇಕಿತ್ತು. ಆದರೆ, ನಮ್ಮ ರಾಜ್ಯದಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಯ ಮುಖ್ಯವಾಹಿನಿಗೆ ತರುವ ವಿಚಾರದಲ್ಲಿ ಕಾರ್ಯಕ್ರಮ ಕ್ಕಿಂತ ಗೊಂದಲಗಳೇ ಹೆಚ್ಚಾಗಿದ್ದು, ಸರ್ವ ಶಿಕ್ಷಣ ಅಭಿಯಾನ ಮುಗಿದು ಹತ್ತು ವರ್ಷಗಳೇ ಕಳೆದರೂ ಎಲ್ಲ ಮಕ್ಕಳನ್ನೂ ಶಾಲಾ ಮುಖ್ಯವಾಹಿನಿಗೆ ತರಲು ಸಾಧ್ಯವಾಗಿಲ್ಲ. ಈ ವಿಷಯದಲ್ಲಿ ತೊಡಕಾಗಿರುವುದು ಮಕ್ಕಳ ನಿಖರ ವಾದ ಅಂಕಿ-ಅಂಶಗಳ ದಾಖಲೆ.

ಸರ್ವ ಶಿಕ್ಷಣ ಅಭಿಯಾನ ಜಾರಿಯಾದ 2001ರಲ್ಲಿ, ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಯನ್ನು 10.22 ಲಕ್ಷವೆಂದು ಅಂದಾಜಿಸಿಸಲಾಗಿತ್ತು. ಜನವರಿ 2010ರಲ್ಲಿ ಈ ಸಂಖ್ಯೆ 1.11 ಲಕ್ಷಕ್ಕೆ ಇಳಿಯಿತೆಂದು ಇಲಾಖೆಯ ಅಂಕಿ-ಅಂಶಗಳು ತಿಳಿಸುತ್ತವೆ. ಆದರೆ, ಸರ್ವ ಶಿಕ್ಷಣ ಅಭಿಯಾನದ 2010-11ನೇ ಸಾಲಿನ ವಿಶ್ಲೇಷಣಾ ವರದಿಯು, ಶಾಲೆ ಬಿಟ್ಟ ಮಕ್ಕಳನ್ನು 39,841 ಎಂದು ಅಂದಾಜಿಸಿದರೆ, ಅದೇ ಸಾಲಿನ ವಾರ್ಷಿಕ ವರದಿಯು ಮಕ್ಕಳ ಸಂಖ್ಯೆಯನ್ನು 1,11,218 ಎಂದು ವರದಿ ಮಾಡುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಕರ್ನಾಟಕ ರಾಜ್ಯ ಅರ್ಥಿಕ ಸಮೀಕ್ಷೆಯ ವರದಿಯು, ಶಾಲೆ ಬಿಟ್ಟ ಮಕ್ಕಳ ಸಂಖ್ಯೆ 35,637 ಎಂದು ಹೇಳುತ್ತದೆ. ಮತ್ತೊಂದೆಡೆ, ಸರ್ವ ಶಿಕ್ಷಣ ಅಭಿಯಾನ ಯೋಜನಾ ಅನುಮೋದನಾ ಮಂಡಳಿಯು 2010ರ ಏಪ್ರಿಲ್ 24ರಂದು ನಡೆದ ತನ್ನ 146ನೇ ಸಭೆಯ ನಡಾವಳಿಯಲ್ಲಿ, ಶಾಲೆಯಿಂದ ಹೊರ ುಳಿದ 1,40,151 ಮಕ್ಕಳನ್ನು ಮುಖ್ಯವಾಹಿನಿಗೆ ತರಲು 3793.92 ಲಕ್ಷ ರೂ.ಗಳನ್ನು ರಾಜ್ಯಕ್ಕೆ ನೀಡಲು ಅನುಮೋದಿಸಿರುವುದಾಗಿ ತಿಳಿಸುತ್ತದೆ. ಅದೇ ಶೈಕ್ಷಣಿಕ ವರ್ಷದಲ್ಲಿ 2010ರ ಅಕ್ಟೋಬರ್ 11ರಂದು ನಡೆದ 157ನೇ ಸಭೆಯಲ್ಲಿ ಯೋಜನಾ ಅನುಮೋದನಾ ಮಂಡಳಿಯು 22460.249 ಲಕ್ಷ ರೂ.ಗಳನ್ನು ಹೆಚ್ಚಿನ ಅನುದಾನವಾಗಿ ಸರ್ವ ಶಿಕ್ಷಣ ಅಭಿಯಾನಕ್ಕೆ ಮತ್ತು ಕಸ್ತೂರಬಾ ಬಾಲಿಕ ವಿದ್ಯಾಲಯದ ಕಾರ್ಯಕ್ರಮಕ್ಕಾಗಿ ಮಂಜೂರು ಮಾಡಿದೆ. ಮುಂದುವರಿದು, ಸರ್ವ ಶಿಕ್ಷಣ ಅಭಿಯಾನದ 2011-2012ನೇ ಸಾಲಿನ ಅಂಕಿ-ಅಂಶಗಳೂ ಇದೇ ರೀತಿಯ ವ್ಯತ್ಯಾಸಗಳಿಂದ ಕೂಡಿವೆ. 

ಅಂಕಿ-ಅಂಶಗಳ ಮೇಲಾಟದ ಕೊನೆಯ ಭಾಗವಾಗಿ, 2012-13ನೇ ಸಾಲಿನಲ್ಲಿ ಸರ್ವ ಶಿಕ್ಷಣ ಅಭಿಯಾನವು ಶಾಲೆಯಿಂದ ಹೊರಗುಳಿದ 51,994 ಮಕ್ಕಳನ್ನು ಶಾಲೆಗೆ ಕರೆತರುವ ಗುರಿ ಮುಟ್ಟುವ ಆಶಯವನ್ನು ಹೊಂದಿದ್ದು, ಡಿಸೆಂಬರ್ 2012ಕ್ಕೆ 34,436 ಮಕ್ಕಳನ್ನು ಶಾಲೆಗೆ ತಂದು ಶೇ.66.23 ಸಾಧನೆಯನ್ನು ಮಾಡಿರುವುದಾಗಿ ತಿಳಿಸುತ್ತದೆ. ಆದರೆ, ಸರ್ವ ಶಿಕ್ಷಣ ಅಭಿಯಾನದ ಯೋಜನಾ ಅನುಮೋದನಾ ಮಂಡಳಿಯು 2012ರ ಏಪ್ರಿಲ್ 30ರಂದು ನಡೆದ 187ನೇ ಸಭೆಯಲ್ಲಿ ಶಾಲೆಯಿಂದ ಹೊರಗುಳಿದ 68,301 ಮಕ್ಕಳನ್ನು ವಿವಿಧ ಕಾರ್ಯಕ್ರಮಗಳ ಮೂಲಕ ಮುಖ್ಯವಾಹಿನಿಗೆ ತರಲು 6697.425 ಲಕ್ಷ ರೂ.ಗಳಿಗೆ ಅನುಮೋದನೆ ನೀಡಿರುತ್ತದೆ. ಆದರೆ, ಇದೇ ಸರ್ವ ಶಿಕ್ಷಣ ಅಭಿಯಾನವು 2013ರ ಫೆಬ್ರವರಿ-ಮಾರ್ಚ್‌ನಲ್ಲಿ ಶಾಲೆಯಿಂದ ಹೊರಗುಳಿದ ಒಟ್ಟು ಮಕ್ಕಳ ಸಂಖ್ಯೆ ಕೇವಲ 22,738 ಎಂದು ಅಂದಾಜಿಸುತ್ತದೆ.

ಮೇಲಿನ ಅಂಕಿ-ಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಕಳೆದ ಹತ್ತು ವರ್ಷಗಳಲ್ಲಿ ಸರ್ವ ಶಿಕ್ಷಣ ಅಭಿಯಾನವು ತನ್ನ ಉದ್ದೇಶದಂತೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ಮುಖ್ಯ ವಾಹಿನಿಗೆ ಕರೆತರುವ ಮೂಲಕ ಗುಣಾತ್ಮಕ ಶಿಕ್ಷಣದ ಸಾರ್ವತ್ರೀಕರಣ ವನ್ನು ಸಾಧಿಸುವುದಕ್ಕಿಂತಲೂ ಹೆಚ್ಚಾಗಿ, ಅಂಕಿ- ಅಂಶಗಳ ಹಾವು-ಏಣಿ ಆಟದಲ್ಲಿಯೇ ಕಳೆದುಹೋಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಇದರ ಬೆನ್ನಲ್ಲೇ ಶಿಕ್ಷಣವನ್ನು ಮೂಲ ಭೂತ ಹಕ್ಕನ್ನಾಗಿಸುವ ಶಿಕ್ಷಣ ಹಕ್ಕು ಕಾಯ್ದೆ ಜಾರಿಯಾಗಿ ಮೂರು ವರ್ಷ ಕಳೆದರೂ, ಸರ್ವ ಶಿಕ್ಷಣ ಅಭಿಯಾನವು ಶಾಲೆ ಬಿಟ್ಟ ಮಕ್ಕಳ ನಿಖರವಾದ ಅಂಕಿ-ಸಂಖ್ಯೆಗಳನ್ನು ಗುರುತಿಸಲಾಗ ದಿರುವುದು ನಿಜಕ್ಕೂ ಕಾನೂನಿಗೆ ಎಸಗಿದ ಅಪಮಾನ ಮತ್ತು ಮಕ್ಕಳ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆ. ಕಾಯಿದೆಯ ಪ್ರಕರಣ 9(ಡಿ) ಅನ್ವಯ ಸ್ಥಳೀಯ ಪ್ರಾಧಿಕಾರವಾದ ಪಂಚಾ ಯಿತಿ /ಪುರಸಭೆ ತನ್ನ ವ್ಯಾಪ್ತಿಯಲ್ಲಿನ 14 ವರ್ಷದವರೆಗಿನ ಎಲ್ಲ ಮಕ್ಕಳ ದಾಖಲೆಗಳನ್ನು ನಿರ್ವಹಿಸಬೇಕೆಂದು ಸೂಚಿಸುತ್ತದೆ. ಆದರೆ, ಈವರೆಗೆ ಯಾವುದೇ ಪಂಚಾಯಿತಿ/ಪುರಸಭೆ ಕಾಯಿದೆ ಅನ್ವಯ ಮಕ್ಕಳ ದಾಖಲೆಗಳನ್ನು ನಿರ್ವಹಿಸುತ್ತಿಲ್ಲ.

ಮಾಧ್ಯಮಗಳಲ್ಲಿನ ವರದಿಯನ್ನು ಪರಿಗಣಿಸಿ, ಕರ್ನಾಟಕ ಹೈಕೋರ್ಟ್ 2013ರ ಮೇನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ವಿಷಯಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದು, ಶಾಲೆಯಿಂದ ಹೊರಗುಳಿದ ಮಕ್ಕಳ ಅಂಕಿ-ಅಂಶಗಳನ್ನು ಒದಗಿಸಲು ಹಲವು ಭಾರಿ ಶಿಕ್ಷಣ ಇಲಾಖೆಗೆ ಸೂಚಿಸಿದ್ದಾಗಿದೆ. ಆದರೆ, ನಿಖರವಾದ ಅಂಕಿ-ಅಂಶಗಳನ್ನು ಒದಗಿಸಲು ಇಲಾಖೆ ಪರದಾಡುತ್ತಿದೆ. ಪ್ರಾಥಮಿಕ ದತ್ತಾಂಶದ ಸಂಶೋಧನೆಯ ಆಧಾರದ ಮೇಲೆ ನಿಖರವಾದ ಅಂಕಿ-ಅಂಶಗಳನ್ನು ನೀಡಲು ಸಾಧ್ಯವಾಗದಿದ್ದರೂ, ದ್ವಿತೀಯ ಹಂತದ ದತ್ತಾಂಶಗಳನ್ನು ಬಳಸಿ ಕೆಲವು ಅಂಕಿ-ಸಂಖ್ಯೆಗಳನ್ನು ಸರಕಾರೇತರ ಸಂಸ್ಥೆಗಳು ಒದಗಿಸಿವೆ. ಇದೆಲ್ಲವನ್ನೂ ಪರಿಶೀಲಿಸಿದ ಹೈಕೋರ್ಟ್, ಕಳೆದ ಬುಧವಾರ (21.08.2013) ನೀಡಿದ ಅದೇಶದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಶಿಕ್ಷಣದ ಸಾರ್ವತ್ರೀಕರ ಣವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಜಂಟಿ ಕಾರ್ಯ ತಂತ್ರದ ಅವಶ್ಯಕತೆಯಿದ್ದು; ನ್ಯಾಯಾಲಯ, ಸರಕಾರೇತರ ಸಂಸ್ಥೆ ಮತ್ತು ಸಂಬಂಧಿಸಿದ ಇಲಾಖೆಯ ಕಾರ್ಯದರ್ಶಿ/ಇಲಾಖಾ ಪ್ರತಿನಿಧಿಗಳು ಸೇರಿ ಮೂರು ವಾರದೊಳಗಾಗಿ ಸಭೆ ನಡೆಸಿ ಕೋರ್ಟ್‌ಗೆ ವರದಿ ಸಲ್ಲಿಸುವಂತೆ ಸೂಚಿಸಿದೆ. ಈ ಆದೇಶ, ಶಾಲೆಯಿಂದ ಹೊರಗುಳಿದಿರುವ ಮತ್ತು ಶಾಲೆಗೆ ಹೋಗದಿರುವ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಮತ್ತು ಅವಕಾಶ ವಂಚಿತ ಮಕ್ಕಳ ಪಾಲಿಗೆ ಆಶಾಕಿರಣವಾಗಿದೆ.

ಶಿಕ್ಷಣ ಹಕ್ಕು ಕಾಯಿದೆ ಅಡಿಯಲ್ಲಿ ಈಗಾಗಲೇ ಸೂಚಿಸಿರುವಂತೆ ಪ್ರತಿಯೊಂದು ಪಂಚಾಯಿತಿ/ಪುರಸಭೆ ವ್ಯಾಪ್ತಿಯಲ್ಲಿ ಬರುವ 14 ವರ್ಷದವರೆಗಿನ ಮಕ್ಕಳ ದಾಖಲೆಗಳನ್ನು ಸಂಗ್ರಹಿಸಿ; ಪ್ರತಿಯೊಂದು ಮಗುವಿಗೂ ಅರೈಕೆ, ರಕ್ಷಣೆ, ಅರೋಗ್ಯ ಮತ್ತು ಎಲಿಮೆಂಟರಿ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅನುವಾಗುವಂತೆ ಈ ಹೊಸ ಕಾರ್ಯತಂತ್ರವನ್ನು ರೂಪಿಸಬೇಕಿದೆ. ಒಟ್ಟಾರೆ, ಇಲಾಖೆಯ ಅಂಕಿ-ಅಂಶಗಳ ಮೇಲಾಟದಲ್ಲಿ ಮಕ್ಕಳು ಬಲಿಪಶುವಾಗದಂತೆ ಎಲ್ಲ ರೀತಿಯ ಎಚ್ಚರಿಕೆಗಳನ್ನು ವಹಿಸುವ ಅಗತ್ಯವಿದೆ.

-ನಿರಂಜನಾರಾಧ್ಯ  ವಿ ಪಿ

Courtesy: Vijaya Karnataka, August 26, 2013

Copyright © 2013 amuct.org. All Rights Reserved | Powered by eCreators
Home | News | Sitemap | Contact

OFFICE:
AMUCT, I Floor, Nithyananda Complex,
A.S.R.P. Road,
Near Nava Bharath Circle,
Kodialbail, Mangalore- 575 003

 

E-Mail: This email address is being protected from spambots. You need JavaScript enabled to view it.
E-Mail: This email address is being protected from spambots. You need JavaScript enabled to view it.