ಹೊಸದಿಲ್ಲಿ: ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ವಿಧಿಸುವ ನೂರೆಂಟು ರೂಪದ ತಲಾವಂತಿಗೆ (ಕ್ಯಾಪಿಟೇಷನ್ ಫೀ) ವಿರುದ್ಧ ಸುಪ್ರೀಂ ಕೊರ್ಟ್ ಕೆಂಡಕಾರಿದೆ. ಖಾಸಗಿ ತಾಂತ್ರಿಕ ಹಾಗೂ ವೈದ್ಯಕೀಯ ಕಾಲೇಜುಗಳು ವಿದ್ಯಾರ್ಥಿಗಳಿಂದ ತಲಾವಂತಿಗೆ ಸಂಗ್ರಹಿಸುವುದು ಅಕ್ರಮ ಹಾಗೂ ಅನೈತಿಕ ಎಂದು ವರಿಷ್ಠ ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಹಾವಳಿಯನ್ನು ಸಂಪೂರ್ಣ ಇಲ್ಲವಾಗಿಸುವ ಸಲುವಾಗಿ ಶಾಸನ ರೂಪಿಸುವಂತೆ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.


'' ಖಾಸಗಿ ಕಾಲೇಜುಗಳು ದೇಣಿಗೆ ಇತ್ಯಾದಿ ರೂಪದಲ್ಲಿ ಭಾರಿ ಪ್ರಮಾಣದ ತಲಾವಂತಿಗೆ ಸಂಗ್ರಹಿಸುತ್ತಿವೆ. ಇದರಿಂದ ಎಂಬಿಬಿಎಸ್ ಹಾಗೂ ಇನ್ನಿತರ ಸ್ನಾತಕೋತ್ತರ ಪದವಿಗಳು ಕೋಟ್ಯಂತರ ರೂ. ಮುಟ್ಟಿವೆ. ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಪದವಿಗಳಿಗೆ ವಿದ್ಯಾರ್ಥಿಗಳಿಂದ ಲಕ್ಷ, ಕೆಲವೊಮ್ಮೆ ಕೋಟಿ ಪ್ರಮಾಣದಲ್ಲಿಯೂ ಹಣ ಪೀಕುತ್ತಿರುವುದು ವರದಿಯಾಗಿದೆ. ಖಾಸಗಿ ಕಾಲೇಜುಗಳು ಡೊನೇಷನ್ ಹಾವಳಿಯನ್ನೇ ನೆಪ ಮಾಡಿಕೊಂಡು ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ತಮ್ಮಿಂದ ದೂರ ಇರುವಂತೆ ನೋಡಿಕೊಂಡಿವೆ. ಹೀಗಾಗಿ ಬಡ ವಿದ್ಯಾರ್ಥಿಗಳು ವೈದ್ಯಕೀಯ, ಎಂಜಿನಿಯರಿಂಗ್ ಇತ್ಯಾದಿ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ,'' ಎಂದು ಕೆ.ಎಸ್.ರಾಧಾಕೃಷ್ಣನ್ ಹಾಗೂ ಎ.ಕೆ.ಸಿಕ್ರಿ ಅವರಿದ್ದ ಪೀಠ ಕಳವಳ ವ್ಯಕ್ತಪಡಿಸಿತು.

ವೈದ್ಯಕೀಯ, ಎಂಜಿನಿಯರಿಂಗ್, ನರ್ಸಿಂಗ್ ಹಾಗೂ ಅರೆ-ವೈದ್ಯಕೀಯ ಕಾಲೇಜುಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿದ್ದು, ದೇಶದಲ್ಲಿ ಶಿಕ್ಷಣದ ಗುಣಮಟ್ಟವನ್ನು ಅಧೋಗತಿಗೆ ತಂದಿವೆ ಎಂದೂ ಸುಪ್ರೀಂ ಕೋರ್ಟ್ ಖೇದ ವ್ಯಕ್ತಪಡಿಸಿತು. ''ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಖಾಸಗಿ, ಅದರಲ್ಲೂ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣ ನೀಡುವ ಕಾಲೇಜುಗಳು ತುದಿಗಾಲ ಮೇಲೆ ನಿಂತಿವೆ. ಈ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳು, ಸೂಕ್ತ ಸವಲತ್ತು ಗಗನ ಕುಸುಮವಾಗಿದೆ. ದುರಾದೃಷ್ಟಕ್ಕೆ ಸಾಕಷ್ಟು ಶಿಕ್ಷಕರೂ ಇಲ್ಲ. ಇದರಲ್ಲಿ ಹಣ ದೋಚುವ ಉದ್ದೇಶವಷ್ಟೇ ಅಡಗಿದೆಯೇ ಹೊರತು ಸಮುದಾಯಕ್ಕೆ ಶಿಕ್ಷಣ ನೀಡುವುದಲ್ಲ,'' ಎಂದು ಕೋರ್ಟ್ ಕಿಡಿಕಾರಿತು.

ಸರಕಾರಕ್ಕೂ ಛಡಿಯೇಟು: ಮಣಿಪಾಲ ಮೂಲದ 'ಟಿಎಂಎ ಪೈ ಫೌಂಡೇಷನ್' ಪ್ರಕರಣದ ಹಿನ್ನೆಲೆಯಲ್ಲಿ ಕ್ಯಾಪಿಟೇಷನ್ ಫೀ ಸಂಗ್ರಹಿಸುವಂತಿಲ್ಲ ಎಂದು ಈಗಾಗಲೇ ಆದೇಶ ನೀಡಿದ್ದರೂ ಖಾಸಗಿ ಕಾಲೇಜುಗಳ ದೋಚುವಿಕೆ ಮುಂದುವರಿದಿದೆ. ಆದರೂ ಖಾಸಗಿ ಕಾಲೇಜುಗಳಿಗೆ ಕಡಿವಾಣ ಹಾಕಿ ಬಡ ವಿದ್ಯಾರ್ಥಿಗಳ ಹಿತ ಕಾಯಬೇಕಾದ ಸರಕಾರ ಹಾಗೂ ಸಂಬಂಧಿಸಿದ ಇಲಾಖೆಗಳು, ಸಚಿವಾಲಯಗಳು ಕಣ್ಮುಚ್ಚಿ ಕುಳಿತಿವೆ ಎಂದು ನ್ಯಾಯಾಲಯ ಕೇಂದ್ರಕ್ಕೆ ಬಿಸಿ ಮುಟ್ಟಿಸಿತು. ಇನ್ನೂ ಮುಂದುವರಿದು, ''ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಅಧಃ ಪತನದತ್ತ ಸಾಗುತ್ತಿರುವುದನ್ನು ಸಿಬಿಐ ವರದಿ ಸಾಬೀತುಪಡಿಸಿದೆ. ಪಂಜಾಬ್‌ನ ವೈದ್ಯಕೀಯ ಕಾಲೇಜೊಂದಕ್ಕೆ ಮಾನ್ಯತೆ ಗಳಿಸಿಕೊಡುವ ಸಲುವಾಗಿ ಲಂಚ ಪಡೆದುಕೊಂಡ ಆರೋಪದ ಮೇಲೆ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಅಧ್ಯಕ್ಷರನ್ನು ಬಂಧಿಸಲಾಗಿದ್ದ ಪ್ರಕರಣವನ್ನಂತೂ ಮರೆಯುವಂತಿಲ್ಲ. ಭಾರತೀಯ ವೈದ್ಯಕೀಯ ಮಂಡಳಿ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ), ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮುಂತಾದ ನಿಯಂತ್ರಣ ಸಂಸ್ಥೆಗಳು ರಾಜಕೀಯ ಪ್ರಭಾವಕ್ಕೆ ಒಳಗಾಗಿವೆ. ವಶೀಲಿಗೆ ಇಳಿದಿರುವವರಿಗೆ ಲಾಭ ಮಾಡಿಕೊಡಲು ನಿಂತಿವೆ. ಇದೆಲ್ಲವನ್ನು ಸರಿಪಡಿಸಿ ನಿಯಂತ್ರಿಸುವ ಸಂಬಂಧಿಸಿದ ಸರಕಾರಿ ಇಲಾಖೆಗಳು ನಿರ್ಲಕ್ಷ್ಯ ತೋರಿವೆ,'' ಎಂದು ನ್ಯಾಯಾಲಯ ಆರೋಪಿಸಿತು. ಇನ್ನಾದರೂ ಖಾಸಗಿ ಕಾಲೇಜುಗಳ ಕ್ಯಾಪಿಟೇಷನ್ ಹಾವಳಿಗೆ ಮಂಗಳ ಹಾಡಲು ಕೇಂದ್ರ ಸರಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಸಿಬಿಐ ಹಾಗೂ ಇನ್ನಿತರ ಗುಪ್ತಚರ ಸಂಸ್ಥೆಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಹಣ ದೋಚುವ ಅನಿಷ್ಟ ಪದ್ಧತಿಗಳನ್ನು ಅಳವಡಿಸಿಕೊಂಡಿರುವ ಕಾಲೇಜುಗಳನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು. ಇದಕ್ಕಾಗಿ ಕೇಂದ್ರ ಕಠಿಣ ಶಾಸನ ರೂಪಿಸಬೇಕು ಎಂದು ಸೂಚನೆ ನೀಡಿತು.

Courtesy: Vijaya Karnataka, Sept 9, 2013