ಆಡಳಿತ ನಡೆಸುವ ಪಕ್ಷ ಬದಲಾದ ತಕ್ಷಣ ಆಡಳಿತ ನೀತಿಗಳಲ್ಲಿ ಬದಲಾವಣೆ ಸಂಭವಿ­ಸು­ವುದಿಲ್ಲ ಎಂಬುದಕ್ಕೆ ಮತ್ತೊಂದು ಸಾಕ್ಷಿಯನ್ನು ಒದಗಿಸುವಂಥ ಮಾತುಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಅವರು ಆಡಿದ್ದಾರೆ.

ಈ ಹಿಂದಿದ್ದ ಬಿಜೆಪಿ ಸರ್ಕಾರ ವಿಶ್ವವಿದ್ಯಾಲಯ ಎಂಬ ಪರಿಕಲ್ಪನೆಗೇ ಅವಮಾನ ಮಾಡುವಂತೆ ಏಕ ಶಿಸ್ತಿನ ವಿಶ್ವವಿದ್ಯಾಲಯ­ಗಳನ್ನು ಸಾಲು ಸಾಲಾಗಿ ಸ್ಥಾಪಿಸಿತು. ಸಂಗೀತ­ಕ್ಕೊಂದು, ಸಂಸ್ಕೃತಕ್ಕೊಂದು, ಜಾನಪದಕ್ಕೊಂದು ಹೀಗೆ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದ ಆ ಸರ್ಕಾರ ಆಯುರ್ವೇದಕ್ಕೂ ಯೋಗಕ್ಕೂ ಜ್ಯೋತಿಷಕ್ಕೂ ವಿಶ್ವವಿದ್ಯಾಲಯ ಸ್ಥಾಪಿಸುವುದಕ್ಕೆ ಮುಂದಾಗಿತ್ತು. ಈ ಏಕಶಿಸ್ತಿನ ವಿಶ್ವವಿದ್ಯಾಲಯ­ಗಳ ಪರಿಕಲ್ಪನೆ ಬಿಜೆಪಿ ಸರ್ಕಾರದ್ದೇನೂ ಆಗಿರಲಿಲ್ಲ. ಅದಕ್ಕೂ ಹಿಂದಿದ್ದ ಕಾಂಗ್ರೆಸ್ ಮತ್ತು ಜನತಾದಳ ಸರ್ಕಾರಗಳೇ ಇಂಥದ್ದೊಂದು ಪರಂಪರೆಯನ್ನು ಆರಂಭಿಸಿದ್ದವು. ಆರೋಗ್ಯ­ಕ್ಕೊಂದು, ತಂತ್ರಜ್ಞಾನಕ್ಕೊಂದು ವಿಶ್ವವಿದ್ಯಾಲಯ­ವನ್ನು ಆರಂಭಿಸಿದಾಗಲೇ ಉನ್ನತ ಶಿಕ್ಷಣಕ್ಕಿದ್ದ ಸಂಶ್ಲೇಷಣಾತ್ಮಕ ಗುಣ ಇಲ್ಲವಾಗಿತ್ತು. ಮಹಿಳಾ ವಿಶ್ವವಿದ್ಯಾಲಯವೊಂದನ್ನು ಆರಂಭಿಸಿದಾಗ ಇನ್ನುಳಿದ ವಿಶ್ವವಿದ್ಯಾಲಯಗಳಲ್ಲಿ ಮಹಿಳೆಯರಿಗೆ ಅವಕಾಶವಿಲ್ಲವೇ ಎಂಬ ಪ್ರಶ್ನೆಯೂ ಎದ್ದಿತ್ತು.

ಉನ್ನತ ಶಿಕ್ಷಣ ಹೆಚ್ಚು ಜನರಿಗೆ ತಲುಪುವುದಕ್ಕೆ ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚಲೇ ಬೇಕಾ­ಗುತ್ತದೆ. ಆದರೆ ಈ ಸಂಖ್ಯೆಯನ್ನು ಹೆಚ್ಚಿಸುವ ವಿಧಾನ ಯಾವುದು? ಒಂದೊಂದು ವಿಷಯಕ್ಕೆ ಒಂದೊಂದು ವಿಶ್ವವಿದ್ಯಾಲಯವನ್ನು ರೂಪಿಸು­ವುದಕ್ಕೆ ಸಂಬಂಧಿಸಿದಂತೆ ಕೇರಳದ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಪ್ರಖ್ಯಾತ ಇತಿಹಾಸಕಾರ ಕೆ.ಎನ್.ಪಣಿಕ್ಕರ್ ಅವರು ‘ಇದು ಹೀಗೆಯೇ ಮುಂದುವರಿದರೆ ಬಟ್ಟೆ ತಯಾರಿಸು­ವುದಕ್ಕೊಂದು, ಕಸೂತಿಗೆ ಇನ್ನೊಂದು, ಹೊಲಿಗೆಗೆ ಮತ್ತೊಂದು ವಿಶ್ವವಿದ್ಯಾಲಯಗಳನ್ನು ನಮ್ಮ ಸರ್ಕಾರಗಳು ಸ್ಥಾಪಿಸಿಬಿಡಬಹುದು’ ಎಂಬ ಸಂಶಯವನ್ನು ವ್ಯಕ್ತಪಡಿಸಿದ್ದರು.

ಕರ್ನಾಟಕದಲ್ಲಿ ಈಗಾಗಲೇ ಇರುವ ವಿಷಯ ವಿಶ್ವವಿದ್ಯಾಲಯಗಳು ಏನು ಮಾಡುತ್ತಿವೆ ಎಂಬುದನ್ನು ಗಮನಿಸಿದರೆ ಈ ವಿಷಯ ವಿಶ್ವವಿದ್ಯಾಲಯಗಳ ಮಿತಿ ಅರ್ಥವಾಗುತ್ತದೆ. ತಥಾಕಥಿತ ಜಾನಪದ ತಜ್ಞರ ಒತ್ತಾಯ ಮತ್ತು ಬೆಂಬಲದೊಂದಿಗೆ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯಾಯಿತು. ಅದು ಇತರ ಎಲ್ಲಾ ವಿಶ್ವ­ವಿದ್ಯಾಲಯ­ಗಳಂತೆಯೇ ಒಂದು ಎಂಬಿಎ ಕೋರ್ಸ್ ಕೂಡಾ ಆರಂಭಿಸಿದೆ. ಇದು ಗ್ರಾಮೀಣ ಅ­ಭಿವೃದ್ಧಿಗೆ ಸಂಬಂಧಿಸಿದ ಸ್ನಾತಕೋತ್ತರ ಪದವಿ. ಇಂಥದ್ದೊಂದು ಕೋರ್ಸ್ ಆರಂಭಿಸುವುದಕ್ಕೆ ಜಾನಪದ ವಿಶ್ವವಿದ್ಯಾಲಯವೇ ಏಕೆ ಬೇಕಿತ್ತು ಎಂಬುದು ಇಲ್ಲಿರುವ ಪ್ರಶ್ನೆ. ಇದನ್ನು ಕರ್ನಾಟಕ­ದಲ್ಲಿ ಈಗಾಗಲೇ ಇರುವ ಯಾವುದೇ ವಿಶ್ವ­ವಿದ್ಯಾ­ಲಯ ಆರಂಭಿಸಬಹುದಿತ್ತು. ಹಾಗೆ ನೋಡಿದರೆ ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರ, ರಾಜ್ಯಶಾಸ್ತ್ರದಂಥ ವಿಷಯಗಳ ತಜ್ಞರಿರುವ ವಿಶ್ವವಿದ್ಯಾಲಯ­ವೊಂದರಲ್ಲಿ ಇಂಥದ್ದೊಂದು ಕೋರ್ಸ್ ಆರಂಭ­ವಾಗಿದ್ದರೆ ಅದು ಹೆಚ್ಚು ಪರಿಣಾಮಕಾರಿಯೂ ಆಗಬಹುದಿತ್ತೇನೋ?

ಭಾರೀ ನಿರೀಕ್ಷೆಯೊಂದಿಗೆ ಆರಂಭವಾದ ಕನ್ನಡ ವಿಶ್ವವಿದ್ಯಾಲಯ ಕನ್ನಡದಲ್ಲೇ ಜ್ಞಾನವನ್ನು ಸೃಷ್ಟಿಸಿ ಅದು ಪಸರಿಸುವಂತೆ ನೋಡಿಕೊಳ್ಳುವ ಕೆಲಸ ಮಾಡಬೇಕಿತ್ತು. ಇಲ್ಲಿರುವ ಅಭಿವೃದ್ಧಿ ಅಧ್ಯಯನ ವಿಭಾಗ ಮಾಡಿದ ಕೆಲಸಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ‘ಜ್ಞಾನ ಸೃಷ್ಟಿ’ಯ ಕ್ರಿಯೆ ಎಂಬುದು ಕೇವಲ ಸಾಹಿತ್ಯ, ಜಾನಪದ ವಿಷಯಗಳಿಗೆ  ಸೀಮಿತವಾಗಿ­ಬಿಡು­ತ್ತದೆ. ಸ್ವಲ್ಪ ಉದಾರ ಮೌಲ್ಯಮಾಪನಕ್ಕೆ ಹೊರ­ಟರೆ ಹಸ್ತಪ್ರತಿ ಅಧ್ಯಯನದಂಥ ಮತ್ತೂ ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ವಿಚಾರಗಳು ಇದರಲ್ಲಿ ಒಳಗೊಳ್ಳಬಹುದೇ ಹೊರತು ಉಳಿದೆಲ್ಲಾ ಮಾನವಿಕಗಳ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯದ ಸಾಧನೆಯೂ ಶೂನ್ಯದ ಸಮೀಪವೇ ಸುಳಿದಾಡುತ್ತದೆ. ಇನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ವಿಚಾರವನ್ನಂತೂ ಕೇಳುವಂತೆಯೇ ಇಲ್ಲ. ಎಂದೋ ಒಮ್ಮೆ ನಡೆಸುವ ಕಾರ್ಯಾಗಾರ ಮತ್ತು ವಿಚಾರ ಸಂಕಿರಣ­ಗಳಲ್ಲಷ್ಟೇ ಈ ವಿಚಾರಗಳಿರುತ್ತವೆ.

ಎಚ್.ಕೆ. ಪಾಟೀಲ ಅವರು ಪ್ರಸ್ತಾಪಿಸಿರುವ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಅವರದೇ ಮಾತುಗಳಲ್ಲಿ ಹೇಳುವುದಾದರೆ ‘‘ಶೌಚಾಲಯ, ಇಂಗುಗುಂಡಿ ನಿರ್ಮಾಣ ಸೇರಿದಂತೆ ಇಲಾಖೆಯ ಅಧೀನದಲ್ಲಿ ಕೈಕೊಳ್ಳುವ ಕಾಮಗಾರಿಗಳ ಕೌಶಲದ ಬಗ್ಗೆ ತಿಳಿಸಿಕೊಡಬೇಕು ಎಂಬುದು ವಿಶ್ವವಿದ್ಯಾಲಯ ಸ್ಥಾಪನೆಯ ಆಶಯ’’. ಸಚಿವರು ಮುಂದಿಡುತ್ತಿರುವ ಆಶಯಕ್ಕೆ ಒಂದು ವಿಶ್ವವಿದ್ಯಾಲಯದ ಅಗತ್ಯವಿದೆಯೇ? ಅಂಥ­ದ್ದೊಂದು ಅಗತ್ಯವಿದೆ ಎಂದಾದರೆ ಅದು ಈಗಿರುವ ಎಲ್ಲಾ ವಿಶ್ವವಿದ್ಯಾಲಯಗಳ ವೈಫಲ್ಯ­ವನ್ನು ತೋರಿಸುತ್ತಿದೆ ಎಂದರ್ಥ. ಅದಕ್ಕೆ ಯಾರು ಕಾರಣರು?"

ಮತ್ತೆ ಬೆರಳುಗಳು ಸರ್ಕಾರದತ್ತಲೇ ಬೊಟ್ಟುಮಾಡುತ್ತವೆ. ಅಂದರೆ ಈಗಾಗಲೇ ಇರುವ ವಿಶ್ವವಿದ್ಯಾಲಯಗಳ ವೈಫಲ್ಯವನ್ನು ಅರಿತು ಅವುಗಳನ್ನು ಸರಿಪಡಿಸುವ ಬದಲಿಗೆ ಹೊಸತೊಂದು ವಿಶ್ವವಿದ್ಯಾಲಯವನ್ನು ಹುಟ್ಟು ಹಾಕುವುದರಲ್ಲಿ ಸಚಿವರು ಉತ್ತರ ಕಂಡುಕೊಳ್ಳು­ತ್ತಿದ್ದಾರೆ. ಈ ಹೊಸತು ಕೂಡಾ ತನ್ನ ಪೂರ್ವಗಾಮಿಗಳಂತೆಯೇ ವಿಫಲವಾಗುವುದಿಲ್ಲ ಎಂಬುದಕ್ಕೆ ಏನು ಖಾತರಿಯಿದೆ? ಸಚಿವರ ಆಶಯದಂತೆ ಇಂಗುಗುಂಡಿಗಳು, ಶೌಚಾಲಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧೀನದಲ್ಲಿ ಕೈಗೊಳ್ಳಲಾಗುವ ಕಾಮಗಾರಿಗಳ ಕೌಶಲದ ಬಗ್ಗೆ ತಿಳಿಸಿಕೊಡುವುದಕ್ಕೆ ಒಂದು ವಿಶ್ವವಿದ್ಯಾಲಯಕ್ಕಿಂತ ಹೆಚ್ಚಾಗಿ ಹಲವಾರು ಪಾಲಿಟೆಕ್ನಿಕ್‌ಗಳು ಬೇಕು. ಇವು ಪ್ರತೀ ತಾಲೂಕು ಕೇಂದ್ರಗಳಲ್ಲಿಯೂ ಇರಬೇಕು.

ಇಕಾಲಜಿಯ (Ecology) ಪರಿಕಲ್ಪನೆ ಮೂಡುವುದರೊಂದಿಗೆ ವಿಶ್ಲೇಷಣಾತ್ಮಕ ವಿಜ್ಞಾನ ಒಂದು ಬಗೆಯಲ್ಲಿ ಹಿಂದೆ ಸರಿಯಿತು. ನಾವಿಂದು ವಿವಿಧ ಶಿಸ್ತುಗಳು ಒಂದಾಗಿ ಕಾರ್ಯನಿರ್ವಹಿಸಬೇಕಾದ ಕಾಲಘಟ್ಟ­ದಲ್ಲಿದ್ದೇವೆ. ಜಾನಪದ ಜ್ಞಾನವನ್ನು ಸಾಕ್ಷ್ಯಗಳನ್ನು ಆಧಾರವಾಗಿಟ್ಟುಕೊಂಡ ವೈಜ್ಞಾನಿಕ ವಿಧಾನ­ದಲ್ಲಿ ಅರ್ಥ ಮಾಡಿಕೊಂಡರೆ ಅದನ್ನು ವರ್ತ­ಮಾನಕ್ಕೆ ಪ್ರಸ್ತುತಗೊಳಿಸಬಹುದು. ಅಥವಾ ಇದೇ ಜ್ಞಾನವನ್ನು ಬಳಸಿಕೊಂಡು ತಥಾಕಥಿತ ವೈಜ್ಞಾನಿಕ ವಿಧಾನದ ಮಿತಿಗಳನ್ನೂ ಅರಿಯ­ಬಹುದು.

ಆದರೆ ಇದಕ್ಕೆ ಆಧುನಿಕ ವಿಜ್ಞಾನ ಮತ್ತು ಜಾನಪದ ಜ್ಞಾನಗಳೆರಡೂ ಸೇರ­ಬೇಕಾಗುತ್ತದೆ. ಅಭಿವೃದ್ಧಿಯನ್ನು ಅರ್ಥ ಮಾಡಿ­ಕೊಳ್ಳುವುದಕ್ಕೆ ಕೇವಲ ಅರ್ಥಶಾಸ್ತ್ರಕ್ಕೆ ಸಾಧ್ಯವಿಲ್ಲ. ಮಾನವಶಾಸ್ತ್ರ, ರಾಜ್ಯಶಾಸ್ತ್ರಗಳ ಶಿಸ್ತಿನ ಮೂಲಕವೂ ಇವುಗಳನ್ನು ಗ್ರಹಿಸಬೇಕಾಗುತ್ತದೆ. ಗುಜರಾತ್‌ನ ಹಾಲು ಉತ್ಪಾದಕರ ಸಹಕಾರ ಸಂಘಗಳು ಮತ್ತು ಮಹಾರಾಷ್ಟ್ರದ ಸಹಕಾರಿ ಸಕ್ಕರೆ ಕಾರ್ಖಾನೆಗಳ ಯಶಸ್ಸಿನ ಹಿಂದೆ ಇದ್ದ ‘ಜಾತಿ ಸಂಬಂಧ’ಗಳನ್ನು ಪ್ರೊ.ಬಾಬುರಾವ್ ಬಾವಿಸ್ಕರ್ ಅವರು ಹೊರಗೆಳೆದು ತಂದರು. ಇದು ಸಾಧ್ಯವಾದದ್ದು ಕೇವಲ ಸಹಕಾರ ತತ್ವದ ಹಿಂದಿರುವ ಆರ್ಥಶಾಸ್ತ್ರವನ್ನು ಅರ್ಥ ಮಾಡಿ­ಕೊಂಡಿದ್ದರಿಂದಲ್ಲ. ಇಲ್ಲಿ ಮಾನವಶಾಸ್ತ್ರ, ರಾಜ್ಯಶಾಸ್ತ್ರಗಳೂ ಬಳಕೆಯಾಗಿದ್ದವು. ಗ್ರಾಮೀಣ ಅಭಿವೃದ್ಧಿಯನ್ನು ವಿಜ್ಞಾನ, ತಂತ್ರಜ್ಞಾನ, ಮಾನವ­ಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ತತ್ವಶಾಸ್ತ್ರ ಇವುಗಳನ್ನೆಲ್ಲಾ ಹೊರಗಿಟ್ಟು ಗ್ರಹಿಸಲು ಸಾಧ್ಯವೇ? ಅದು ಸಾಧ್ಯವಿಲ್ಲ ಎಂದಾ­ದರೆ ಗ್ರಾಮೀಣಾಭಿವೃದ್ಧಿ ಎಂಬ ವಿಷಯಕ್ಕಷ್ಟೇ ಒಂದು ವಿಶ್ವವಿದ್ಯಾಲಯ ಸಾಧ್ಯವಿಲ್ಲ ಎಂದರ್ಥವಲ್ಲವೇ?

ಕೃಷಿ ವಿಶ್ವವಿದ್ಯಾಲಯದ ಅಡಿಯಲ್ಲಿ ಈ ಮೊದಲು ತೋಟಗಾರಿಕೆ, ಪುಷ್ಪೋದ್ಯಮ, ಪಶುವಿಜ್ಞಾನ, ಮೀನುಗಾರಿಕೆ ಮುಂತಾದುವು­ಗಳೆಲ್ಲವೂ ಇದ್ದವು. ಆದರೆ ಈಗ ತೋಟಗಾರಿಕೆ­ಗೊಂದು ವಿಶ್ವವಿದ್ಯಾಲಯವಿದೆ. ಪಶುವಿಜ್ಞಾನಕ್ಕೆ ಮತ್ತೊಂದಿದೆ. ಇನ್ನೇನು ಮೀನುಗಾರಿಕೆಗೆ ಮತ್ತೊಂದು ವಿಶ್ವವಿದ್ಯಾಲಯದ ಸ್ಥಾಪನೆಯೂ ಆಗಬಹುದು. ಪುಷ್ಪೋದ್ಯಮಕ್ಕೆ ಮಗದೊಂದು ವಿಶ್ವವಿದ್ಯಾಲಯಕ್ಕೆ ಈ ಸರ್ಕಾರ ಮುಂದಾದರೆ ಆಶ್ಚರ್ಯವೇನೂ ಇಲ್ಲ. ಅಂದರೆ ತೆಂಗಿನ ಮರದ ಬಗ್ಗೆ ತೋಟಗಾರಿಕಾ ವಿಶ್ವವಿದ್ಯಾಲಯದವರು ಅಧ್ಯಯನ ನಡೆಸುತ್ತಾರೆ. ಅದರೊಳಗೆ ಅಂತರ ಬೆಳೆಯಾಗಿರುವ ರಾಗಿಯ ಬಗ್ಗೆ ಕೃಷಿ ವಿಶ್ವವಿದ್ಯಾಲಯ ಸಂಶೋಧನೆ ನಡೆಸಬೇಕಾ­ಗುತ್ತದೆ. ಇನ್ನು ಅದೇ ರೈತ ನಡೆಸುವ ಹೈನು­ಗಾರಿಕೆಯ ಬಗ್ಗೆ ಮತ್ತೊಂದು ವಿಶ್ವವಿದ್ಯಾಲಯ ಸಂಶೋಧನೆ ನಡೆಸುತ್ತದೆ. ಒಂದೇ ಭೂಮಿಯಲ್ಲಿ, ಒಂದೇ ವಾತಾವರಣದಲ್ಲಿ ಒಂದಕ್ಕೊಂದು ಪೂರಕವಾಗಿ ನಡೆಯುವ ಈ ಕ್ರಿಯೆಗಳನ್ನು ಪ್ರತ್ಯೇಕಿಸುವ ಮೂಲಕ ಒಟ್ಟಾರೆಯಾಗಿ ರೈತನಿಗೆ ಉಪಕಾರಿಯಾಗುವಂಥ ಜ್ಞಾನವನ್ನು ಸೃಜಿಸಲು ಸಾಧ್ಯವೇ?

ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ನೇತೃತ್ವ ವಹಿಸಿರುವ ಸಿದ್ದರಾಮಯ್ಯನವರಿಗೆ ಆರ್ಥಿಕತೆಯ ಬಗ್ಗೆ ಸಮಗ್ರ ಪರಿಕಲ್ಪನೆಯಿದೆ ಎನ್ನಲಾಗುತ್ತದೆ. ಎಚ್.ಕೆ. ಪಾಟೀಲರು ಗ್ರಾಮೀಣಾಭಿವೃದ್ಧಿಯ ಬಗ್ಗೆ ಸೃಜನಾತ್ಮಕವಾಗಿ ಯೋಚಿಸುತ್ತಾರೆಂಬ ಪ್ರತೀತಿ ಇದೆ. ಆದರೆ ಏಕಶಿಸ್ತಿನ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ  ತೋರುವ ಉತ್ಸಾಹವನ್ನು ನೋಡಿದರೆ ಇವರೂ  ತಮಗಿಂತ ಹಿಂದಿದ್ದವರಂತೆಯೇ ಸಂಕುಚಿತ ಚಿಂತನೆಗಳ ಮೂಲಕ ಬದಲಾವಣೆಯ ಬಡಾಯಿಗೆ ಸೀಮಿತಗೊಂಡಿದ್ದಾರೆ ಎನಿಸುತ್ತದೆ