Print

ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳ ಅಧ್ಯಾಪಕರು ಸಂಶೋಧನೆ ಹಾಗೂ ಬೋಧನೆ ಸೇರಿ ವಾರಕ್ಕೆ ಒಟ್ಟು ೨೨ ಗಂಟೆ ಕಾರ್ಯ ನಿರ್ವಹಿಸಬೇಕು ಎಂಬ ನಿಯಮವಿದೆ. ವಿಶ್ವವಿದ್ಯಾಲಯಗಳ ಅನುದಾನ ಆಯೋಗದ (ಯುಜಿಸಿ) ಈ ನಿಯಮ ಆಧರಿಸಿ ರಾಜ್ಯದ ಉನ್ನತ ಶಿಕ್ಷಣ ಇಲಾಖೆ, ಸರ್ಕಾರಿ ಮತ್ತು ಅನುದಾನಿತ ಕಾಲೇಜು ಅಧ್ಯಾಪಕರು ವಾರಕ್ಕೆ ಕಡ್ಡಾಯವಾಗಿ ೨೨ ಗಂಟೆ ಬೋಧನಾ ಕಾರ್ಯ ನಿರ್ವಹಿಸಬೇಕು ಎಂದು ಇದೇ ತಿಂಗಳ 10ರಂದು ಸುತ್ತೋಲೆ ಹೊರಡಿಸಿದೆ.

ಒಂದು ವೇಳೆ ಯಾರಾದರೂ ಅಧ್ಯಾಪಕರು ಸಂಶೋಧನೆಯಲ್ಲಿ ತೊಡಗಿಕೊಂಡಿದ್ದರೆ (ಸಂಶೋಧನೆಯಲ್ಲಿ ತೊಡಗುವುದನ್ನು ಅಧ್ಯಾಪಕರ ಆಯ್ಕೆಗೆ ಬಿಡಲಾಗಿದೆ) ಅವರು ಸೂಕ್ತ ದಾಖಲೆ ಸಲ್ಲಿಸಿ ಆರು ಗಂಟೆಗಳವರೆಗೆ ಬೋಧನಾ ಸಮಯದಿಂದ ವಿನಾಯಿತಿ ಪಡೆಯಬಹುದು ಎಂದು ಅದರಲ್ಲಿ ಹೇಳಲಾಗಿದೆ. ರಾಜ್ಯದ ಬಹುಪಾಲು ಸರ್ಕಾರಿ ಕಾಲೇಜುಗಳಲ್ಲಿ ಸಂಶೋ­ಧ­ನೆಗೆ ಪೂರಕವಾದ ವಾತಾವರಣ ಮತ್ತು ಸೌಲಭ್ಯಗಳು ಇಲ್ಲದಿ­ರುವುದರಿಂದ ಎಲ್ಲ ಸರ್ಕಾರಿ ಕಾಲೇಜುಗಳ ಅಧ್ಯಾಪ­ಕರು ೨೨ ಗಂಟೆ ಬೋಧನಾ ಕಾರ್ಯ ನಿರ್ವಹಿಸಲೇಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.

ಸರ್ಕಾರದ ಈ ಕ್ರಮದ ತಕ್ಷಣದ ಪರಿಣಾಮವಾಗಿ ರಾಜ್ಯದ ವಿವಿಧ ಕಾಲೇಜುಗಳಲ್ಲಿ ಹಲ­ವಾರು ವರ್ಷಗಳಿಂದ ಅತಿ ಕಡಿಮೆ ವೇತನಕ್ಕೆ ದುಡಿಯುತ್ತಿರುವ ಐದು ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಮುನ್ಸೂಚನೆ ಇಲ್ಲದೆಯೇ ಕೆಲಸ ಕಳೆದುಕೊಳ್ಳುವಂತಾಗಿದೆ. ನಿರುದ್ಯೋಗ ಮತ್ತು ನಿರುದ್ಯೋಗಿಗಳ ಸಮಸ್ಯೆಯನ್ನು ಸರ್ಕಾರ ಹಿಂದಿನಿಂ­ದಲೂ ಆದ್ಯತೆಯ ವಿಷಯವಾಗಿ ಪರಿಗಣಿಸಿಲ್ಲ. ಹಾಗಾಗಿ ಬೋಧನಾ ಅವಧಿ ಕುರಿತ ತೀರ್ಮಾನ ಕೈಗೊಳ್ಳುವಾಗ, ಬದುಕಿಗಾಗಿ ಅತಿಥಿ ಉಪನ್ಯಾಸಕ ವೃತ್ತಿಯನ್ನೇ ನಂಬಿರುವವರ ಬಗ್ಗೆ ಆಳುವವರು ಯೋಚಿಸಿರಲಿಕ್ಕಿಲ್ಲ ಎಂದು ಭಾಸವಾಗುತ್ತದೆ.

ಈ ಸುತ್ತೋಲೆಯಿಂದ ಅತಿಥಿ ಉಪನ್ಯಾಸಕರಿಗೆ ಮಾತ್ರ ತೊಂದರೆ ಆಗುತ್ತದೆ ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಆದರೆ ಇದು, ಉನ್ನತ ಶಿಕ್ಷಣದ ಗುಣಮಟ್ಟದ ಮೇಲೆ ಮುಂದಿನ ದಿನಗಳಲ್ಲಿ ಗಂಭೀರ, ನಕಾರಾತ್ಮಕ ಪರಿಣಾಮ ಬೀರಲಿದೆ. ಸಂಶೋಧನೆ ಮತ್ತು ಬೋಧನೆ ಬೇರೆ ಬೇರೆ ಎಂದು ಅರ್ಥ ಮಾಡಿಕೊಳ್ಳುವುದೇ ಇಂದಿನ ಕಾಲಕ್ಕೆ ಸಲ್ಲದ ವಿಚಾರ. ಅಲ್ಲದೆ, ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಸಂಶೋಧನೆಗೆ ಹೊರತಾದ ಬೋಧನೆಯನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯ­ವಿಲ್ಲ. ಹೀಗಿದ್ದರೂ ನಮ್ಮ ಶಿಕ್ಷಣ ಇಲಾಖೆ ಸಂಶೋಧನೆಯೇ ಇಲ್ಲದ ಬೊೋಧನೆ ಸಾಧ್ಯ ಎಂದು ಹೇಗೆ ತೀರ್ಮಾನಿಸಿತು ಎಂಬ ಪ್ರಶ್ನೆ ಶಿಕ್ಷಣ ತಜ್ಞರನ್ನು ಕಾಡುತ್ತಿದೆ.

ಒಂದು ಕಾಲದಲ್ಲಿ ಬೋಧನೆ ಎಂದರೆ, ಅಧ್ಯಾಪಕ ನಿರ್ದಿಷ್ಟ ವಿಷಯದ ಬಗೆಗಿನ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ನೀಡಿದರೆ ಸಾಕು ಎಂಬ ಮಾತಿತ್ತು. ಆದರೆ ಇಂದು ಕಾಲ ಬದಲಾಗಿದೆ. ಇಂದು ಮಾಹಿತಿ ಪಡೆಯಲು ಗ್ರಂಥಾಲಯ, ಅಂತರ್ಜಾಲ, ಕಂಪ್ಯೂಟರ್, ಮೊಬೈಲ್, ಸಾಮಾಜಿಕ ಜಾಲತಾಣಗಳು ಎಂಬ ಹತ್ತು ಹಲವು ಆಕರಗಳಿವೆ. ಆಧುನಿಕ ತಂತ್ರಜ್ಞಾನದ ಅರಿವಿರುವ ವಿದ್ಯಾರ್ಥಿ ತನ್ನ ಆಸಕ್ತಿಯ ವಿಷಯಗಳಲ್ಲಿ ಅಧ್ಯಾಪಕರಿಗಿಂತ ಹೆಚ್ಚಿನ ಮಾಹಿತಿ ಹೊಂದಿರುವ ಸಾಧ್ಯತೆಗಳು ಹೆಚ್ಚು.

ಇದೆಲ್ಲದರ ಪರಿಣಾಮ ಇಂದು ಅಧ್ಯಾಪಕ ವೃತ್ತಿ ರಚನಾ­ತ್ಮಕ­ವಾಗಿ ಬದಲಾಗುವುದರ ಜೊತೆಗೆ ಹೊಸ ಸವಾಲುಗಳಿಗೆ ಎದುರಾಗುತ್ತಿದೆ. ಮಾಹಿತಿ ಮತ್ತು ಜ್ಞಾನದ ನಡುವಿನ ವ್ಯತ್ಯಾಸ ಅಧ್ಯಾಪಕನಿಗೆ ತಿಳಿದಿರಬೇಕು. ಒಂದು ಕಾಲದಲ್ಲಿ ಮಾಹಿತಿ ಒದಗಿಸುವುದಕ್ಕೆ ಸೀಮಿತವಾಗಿದ್ದ ಅಧ್ಯಾಪಕ ಇಂದು ತಾನು ಮತ್ತು ತನ್ನ ವಿದ್ಯಾರ್ಥಿ ಹೊಂದಿರುವ ಮಾಹಿತಿಯನ್ನು ಸಮಾಜ ಹಾಗೂ ವ್ಯವಸ್ಥೆಗೆ ಪೂರಕವಾಗಿ ಅರ್ಥ ಮಾಡಿ­ಕೊಂಡು ಅದನ್ನು ಹೇಗೆ ಜ್ಞಾನವಾಗಿ ಬಳಸಿಕೊಳ್ಳಬೇಕು ಎಂಬ ಕಲೆಯನ್ನು ಕಲಿಸಬೇಕು.

ಇಂದು ಸುಲಭವಾಗಿ ದಕ್ಕುವ ಅಗಾಧ ಮಾಹಿತಿಯನ್ನು ವ್ಯವಸ್ಥಿತ ಚೌಕಟ್ಟಿಗೆ ತಂದು ಜ್ಞಾನ­ವಾಗಿಸಿ ಅದನ್ನು ಸರಳವಾಗಿ ವಿದ್ಯಾರ್ಥಿಗಳಿಗೆ ಬೋಧಿಸುವ ಕಲೆ ಬಹಳ ಶ್ರದ್ಧೆ, ಸಂಯಮ ಮತ್ತು ಸಂಶೋಧನೆಯನ್ನು ಬಯಸುತ್ತದೆ. ಈ ಕಾರಣಕ್ಕಾಗಿ ಇಂದಿನ ಬೋಧಕ ಹೆಚ್ಚು ವಿಶಾಲವಾಗಿ ಯೋಚಿಸಬೇಕಿದೆ. ಹೊಸ ವಸ್ತು ವಿಷಯಗಳನ್ನು ಗ್ರಹಿಸಬೇಕಿದೆ, ತಾನು ಬೋಧಿಸುತ್ತಿರುವ ವಿಷಯದ ಕುರಿತು ದಿನದಿಂದ ದಿನಕ್ಕೆ ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸು­ತ್ತಿ­ರಬೇಕು ಮತ್ತು ಇವೆಲ್ಲವೂ ಬೋಧಕನ ಸಂಶೋಧನೆಯ ಭಾಗವೇ ಆಗಿದೆ.

ಹೀಗಿರುವಾಗ ಪದವಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿ­ರುವ ಅಧ್ಯಾಪಕರ ಸಂಶೋಧನಾ ಸಾಮರ್ಥ್ಯ ಹೆಚ್ಚಿಸಬೇಕಾದ, ಅವರ ಬೌದ್ಧಿಕತೆಯನ್ನು ಕಾಲಕಾಲಕ್ಕೆ ಒರೆಗೆ ಹಚ್ಚಲು ನಿಯಮ ರೂಪಿಸಬೇಕಾದ, ಅವರನ್ನು ನಿರಂತರ ಕಲಿಕೆಯಲ್ಲಿ ತೊಡಗಿಸಲು ಬೇಕಾದ ತಂತ್ರಜ್ಞಾನ ಅಭಿವೃದ್ಧಿಪಡಿಸಬೇಕಾದ ನಮ್ಮ ಶಿಕ್ಷಣ ಇಲಾಖೆ, ‘ನೀವು ಸಂಶೋಧನೆ ಮಾಡುತ್ತಿಲ್ಲವೆ?! ಇಲ್ಲವಾದರೆ ೨೨ ಗಂಟೆ ಪಾಠ ಮಾಡಿ!’ ಎಂದು ಯಾವ ನೆಲೆ­ಯಲ್ಲಿ ಸೂಚಿಸುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ.

ಇಂದು ನಮ್ಮ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯಗಳು ಕಳೆದು ಹೋಗುತ್ತಿವೆ. ತರಗತಿಗಳು ‘ವಿದ್ಯಾರ್ಥಿ ಸ್ನೇಹಿ’ಯಾಗದೆ ಉರು ಹೊಡೆಸುವುದಕ್ಕೆ ಸೀಮಿತವಾಗುತ್ತಿವೆ. ಕಾಲಕ್ಕೆ ತಕ್ಕಂತೆ ಪಠ್ಯಗಳಲ್ಲಿ ಸುಧಾರಣೆ ಆಗುತ್ತಿಲ್ಲ ಎಂಬ ಗಂಭೀರ ಆರೋಪ­ಗಳನ್ನು ನಮ್ಮ ಶಿಕ್ಷಣ ವ್ಯವಸ್ಥೆ ಎದುರಿಸುತ್ತಿದೆ. ಇಂಥ ಹೊತ್ತಿನಲ್ಲಿ ಪದವಿ ಕಾಲೇಜುಗಳ ಯುವ ಮನಸ್ಸು­ಗಳಿಗೆ ಪಾಠ ಹೇಳಬೇಕಾದ ಬೋಧಕನಿಗೆ ಸಂಶೋಧನೆಯು ಒಂದು ಆಯ್ಕೆ ಮಾತ್ರ ಎಂಬಂತೆ ಕಾಣುತ್ತಿರುವುದು ಸರಿಯಲ್ಲ.

ಯಾವುದೇ ಕಾನೂನು–ನಿಯಮದ ಮೌಲ್ಯ ಮತ್ತು ಯಶಸ್ಸು ಅದನ್ನು ಅರ್ಥೈಸುವವನ ಮೇಲೆ ನಿರ್ಧಾರವಾ­ಗು­ತ್ತದೆ ಎಂಬ ಮಾತಿದೆ. ಯುಜಿಸಿಯ ಈ ನಿಯಮವನ್ನು ನಮ್ಮ ಶಿಕ್ಷಣ ಇಲಾಖೆ ಕ್ರಿಯಾಶೀಲವಾಗಿ ಅಳವಡಿಸಿಕೊಳ್ಳುವ ಅವಕಾಶ­ಗಳು ಇವೆ. ಅವುಗಳನ್ನು ಸಲಹೆಯ ರೂಪದಲ್ಲಿ ಪಟ್ಟಿ ಮಾಡಬಹುದು.

*ಯುಜಿಸಿ ನಿಯಮದ ಪ್ರಕಾರ, ಉನ್ನತ ಶಿಕ್ಷಣದಲ್ಲಿ ಅಧ್ಯಾಪಕರಿಗೆ ಸಂಶೋಧನೆ ಮತ್ತು ಬೋಧನೆ ಕಡ್ಡಾಯ. ಹಾಗಾಗಿ, ಪ್ರತಿ ಪದವಿ ಕಾಲೇಜಿನಲ್ಲಿ ಸಂಶೋಧನಾ ಕೇಂದ್ರ ಮತ್ತು ಪೂರಕ ಸೌಲಭ್ಯಗಳನ್ನು ಒದಗಿಸುವ ಪ್ರಸ್ತಾವವನ್ನು ಉನ್ನತ ಶಿಕ್ಷಣ ಇಲಾಖೆ ರೂಪಿಸಿ, ಅನುಮೋದನೆ ಪಡೆಯ­ಬೇಕು. ಅದಕ್ಕೆ ಪೂರಕವಾಗಿ ಯುಜಿಸಿಯ ಈ ನಿಯಮವನ್ನು ಬಳಸಿಕೊಳ್ಳಬೇಕು.

*ಯುಜಿಸಿ ನಿಯಮದ ಪ್ರಕಾರ, ಒಬ್ಬ ಅಧ್ಯಾಪಕ ಸಂಶೋಧನೆ ಮತ್ತು ಬೋಧನೆ ಸೇರಿ ವಾರಕ್ಕೆ ೨೨ ಗಂಟೆ ಕಾರ್ಯ ನಿರ್ವಹಿಸಬೇಕು. ಹಾಗಾಗಿ ಇನ್ನು ಮುಂದೆ ಅಧ್ಯಾಪ­ಕರು ಕಡ್ಡಾಯವಾಗಿ ಆರು ಗಂಟೆಗಳ ಕಾಲ ಸಂಶೋಧನೆ­ಯಲ್ಲಿ ತೋಡಗಲೇಬೇಕು. ತಾವು ಕೈಗೊಂಡ ಸಂಶೋಧನೆಯ ವಿವರಗಳನ್ನು ಆರು ತಿಂಗಳಿಗೊಮ್ಮೆ ವರದಿಯ ರೂಪದಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಬೇಕು. ಅಧ್ಯಾಪಕರು ಸಂಶೋ­ಧನಾ ಲೇಖನ, ಪುಸ್ತಕ ಬರೆಯುವಂಥ ಚಟುವಟಿಕೆ­ಗ­ಳಲ್ಲಿ ತೊಡಗಿಕೊಳ್ಳಬೇಕು.

ಅಧ್ಯಾಪಕರು ಸಲ್ಲಿಸಿದ ಸಂಶೋ­ಧನಾ ವರದಿಗಳನ್ನು ಪರಿಶೀಲಿಸಿ, ಅವರಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಲು ಸಮರ್ಥ ಸಂಶೋಧನಾ ಮತ್ತು ವಿಶ್ಲೇಷಣಾ ವಿಭಾಗವನ್ನು ಜಿಲ್ಲಾ ಮಟ್ಟದಲ್ಲಿ ರೂಪಿಸಬೇಕು. ಅಧ್ಯಾಪಕರು ಸಲ್ಲಿಸಿದ ವರದಿಗೆ ಸೂಕ್ತ ಪ್ರತಿಕ್ರಿ­ಯೆ­ಯನ್ನು ಈ ತಂಡ ಕಡ್ಡಾಯಾಗಿ ನೀಡಬೇಕು. (ಉಪನ್ಯಾಸ­ಕರ ಮೌಲ್ಯಮಾಪನ ಈಗಲೂ ಇದೆ. ಅದರೆ ಅದು ಪರಿಣಾಮ­ಕಾರಿಯಾಗಿಲ್ಲ). ಅಧ್ಯಾಪಕರು ಸಲ್ಲಿಸಿದ ಸಂಶೋ­ಧನಾ ವಿವರಗಳಲ್ಲಿ ಸೂಕ್ತವಾದವುಗಳನ್ನು ಉನ್ನತ ಶಿಕ್ಷಣ ಇಲಾಖೆ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ಮೂಲಕ ಆ ವಿವರಗಳು ಸಾರ್ವಜನಿಕರಿಗೆ ದೊರೆಯುವಂತೆ ಮಾಡಬೇಕು.

*ಪದವಿ ಕಾಲೇಜು ಅಧ್ಯಾಪಕರಿಗೆ ಸಂಶೋಧನೆಯನ್ನು ಕಡ್ಡಾಯಗೊಳಿಸಿ ಅವರನ್ನು ಹೊಸ ವಿಷಯಗಳ ಅನ್ವೇಷಣೆ­ಯಲ್ಲಿ ತೊಡಗಿಸಿಕೊಳ್ಳಬೇಕಿದೆ. ಇಂದು ಟೀಕೆಗೆ ಒಳಗಾಗುತ್ತಿ­ರುವ ಪದವಿ ಕಾಲೇಜುಗಳ ಅಧ್ಯಾಪಕರು ಈ ಕ್ರಮದಿಂದ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಅವಕಾಶ ದೊರೆಯು­ತ್ತದೆ ಮತ್ತು ಪದವಿ ಕಾಲೇಜುಗಳಲ್ಲಿ ಸಂಶೋಧನಾ ವಾತಾವರಣ ರೂಪಿಸಿದಂತಾಗುತ್ತದೆ.
ಈ ಕೆಲಸ ಬಹಳಷ್ಟು ಮಾನವ ಮತ್ತು ತಾಂತ್ರಿಕ ಸಂಪನ್ಮೂ­ಲ­ಗಳನ್ನು ಬೇಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಬದ್ಧತೆ ಬೇಡು­ತ್ತದೆ. ಆದರೆ ಉನ್ನತ ಶಿಕ್ಷಣ ಇಲಾಖೆ ಇದನ್ನು ನಿರ್ವಹಿಸ­ಲೇ­ಬೇಕಿದೆ. ಟೀಕೆಗೊಳಗಾಗುತ್ತಿರುವ ಉನ್ನತ ಶಿಕ್ಷಣ ಕ್ಷೇತ್ರವನ್ನು ಕ್ರಿಯಾಶೀಲವಾಗಿಸಬೇಕಿದೆ. ಸಾಮರ್ಥ್ಯ ಇದ್ದರೂ ತರಗತಿಗಳಿಗೆ ಸೀಮಿತವಾಗಿರುವ ಅಧ್ಯಾಪಕರಿಗೆ ವೇದಿಕೆ ಒದಗಿಸಬೇಕಿದೆ.

ಸಾಮರ್ಥ್ಯ ಇಲ್ಲದೆ ಕಾಲೇಜುಗಳನ್ನು ಹರಟೆಯ ತಾಣ ಮಾಡಿಕೊಂಡಿರುವವರನ್ನು ಹಾದಿಗೆ ತರಬೇಕಿದೆ.
ಅಧ್ಯಾಪಕರಿಗೆ ಸಂಶೋಧನೆಗೆ ಬದಲಾಗಿ ಬೋಧನಾ ಕಾರ್ಯಭಾರವನ್ನು ಹೆಚ್ಚಿಸುವುದರಿಂದ ಅಧ್ಯಾಪಕರ ಮತ್ತು ವಿದ್ಯಾರ್ಥಿಗಳ ದೃಷ್ಟಿಯಲ್ಲಿ ಪದವಿ ಕಾಲೇಜುಗಳು ಇನ್ನೂ ಶುಷ್ಕವಾಗುತ್ತವೆ. ಉನ್ನತ ಶಿಕ್ಷಣ ನಾಲ್ಕು ಗೋಡೆಗಳಿಗೆ ಸೀಮಿತವಾಗುವುದು ಇನ್ನಷ್ಟು ಹೆಚ್ಚಾಗುತ್ತದೆ.

ಡಾ. ಕಿರಣ್ ಎಂ. ಗಾಜನೂರು
ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ

Courtesy: Prajavani, November 17, 2014