ಪ್ರಥಮದರ್ಜೆ ಕಾಲೇಜುಗಳ ಉಪನ್ಯಾಸ­ಕರ ಬೋಧನಾ ಅವಧಿಯನ್ನು ಹೆಚ್ಚಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಅವಧಿ ವಾರಕ್ಕೆ ಈಗ ಇರುವ ೧೬–-೨೦ ಗಂಟೆಗಳಿಂದ (ಪ್ರಯೋಗಶಾಲೆ ರಹಿತ ವಿಷಯಗಳಿಗೆ ೧೬ ಗಂಟೆ,- ಪ್ರಯೋಗಶಾಲೆ ಸಹಿತ ವಿಷಯಗಳಿಗೆ- ೨೦ ಗಂಟೆ) ೨೨-–೨೬ ಗಂಟೆಗಳಿಗೆ ಹೆಚ್ಚಳವಾಗಿದೆ. ಸರ್ಕಾರ ಜಾಣತನದಿಂದ ಸಾರ್ವಜನಿಕರ ಸಹಾನುಭೂತಿ ಗಿಟ್ಟಿಸಿಕೊಂಡು ಉಪನ್ಯಾಸಕರ ಮೇಲೆ ಒತ್ತಡ ತಂದು ತನ್ನ ಆರ್ಥಿಕ ಉದ್ದೇಶ­ಗಳನ್ನು ಈಡೇರಿಸಿಕೊಳ್ಳಲು ಹೊರಟಂತಿದೆ.

ರಾಜ್ಯದಲ್ಲಿ ಸುಮಾರು ೪೫೦ ಸರ್ಕಾರಿ ಪ್ರಥಮ­ದರ್ಜೆ ಕಾಲೇಜುಗಳು ಹಾಗೂ ೩೦೦ ಅನು­ದಾನಿತ ಕಾಲೇಜುಗಳಿವೆ. ಅನುದಾನರಹಿತ ಕಾಲೇಜುಗಳ ಸಂಖ್ಯೆ ೧,೫೦೦ ಮೀರಿದೆ. ಸರ್ಕಾರಿ ಕಾಲೇಜುಗಳಲ್ಲಿ ೬ ಸಾವಿರ ಉಪನ್ಯಾಸಕರು ಯುಜಿಸಿ ವೇತನ ಪಡೆಯುತ್ತಿದ್ದರೆ, ಸುಮಾರು ೧೫ ಸಾವಿರ ಉಪನ್ಯಾಸಕರು ಅತಿಥಿ, ಅರೆಕಾಲಿಕ ಮುಂತಾದ ಹೆಸರುಗಳಲ್ಲಿ ಮಾಸಿಕ ₨ ೧೦ ಸಾವಿರ ವೇತನ (ಈ ವೇತನವನ್ನು ಅವರಿಗೆ ನೀಡಿ­ದಾಗ!) ಪಡೆಯುತ್ತಿದ್ದಾರೆ.

ಅನುದಾನಿತ ಕಾಲೇ­ಜು­ಗಳ ಬಗ್ಗೆ ಸರ್ಕಾರಕ್ಕೆ ಆಸಕ್ತಿಯೇ ಹೊರಟು­ಹೋದಂತಿದೆ. ಹಂತಹಂತವಾಗಿ ಖಾಸಗೀಕರಣ ಮಾಡುತ್ತಾ ಬಂದಿರುವ ಸರ್ಕಾರ ಅನುದಾನಿತ ಉಪನ್ಯಾಸಕರ ಸಂಖ್ಯೆಯನ್ನು ೫ ಸಾವಿರಕ್ಕೆ ಇಳಿಸು­ವಲ್ಲಿ ಯಶಸ್ವಿಯಾಗಿದೆ. ಆದರೆ ಖಾಸಗಿ ಆಡಳಿತ ಮಂಡಳಿಗಳಿಂದ ನೇರ ವೇತನ ಪಡೆಯುತ್ತಿರುವ ಉಪನ್ಯಾಸಕರ ಸಂಖ್ಯೆ ೧೫ ಸಾವಿರ ಮೀರಿದೆ. ಖಾಸಗಿ ಅನುದಾನರಹಿತ ಕಾಲೇಜುಗಳಲ್ಲಿ ಆಡ­ಳಿತ ಮಂಡಳಿ ನೀಡಿದಷ್ಟು ವೇತನ ಪಡೆಯುತ್ತಾ ಕನಿಷ್ಠ ವೇತನ ಸೌಲಭ್ಯ, ಭದ್ರತೆ ಇಲ್ಲದೇ ಕೆಲಸ ಮಾಡುತ್ತಿರುವ ಉಪನ್ಯಾಸಕರ ಸಂಖ್ಯೆ ಹಲವು ಸಾವಿರಗಳನ್ನು ದಾಟಿದೆ.

ಇಂತಹವರ ಪರಿಸ್ಥಿತಿ ಏನಾಗಬಹುದು ಎನ್ನುವ ಕಲ್ಪನೆ ಸರ್ಕಾರಕ್ಕೆ ಇದ್ದಂತಿಲ್ಲ. ಏಕ­ಪಕ್ಷೀಯವಾಗಿ ೧/೩ರಷ್ಟು ಕಾರ್ಯಭಾರವನ್ನು ಹೆಚ್ಚಿಸಿದರೆ, ಮೊದಲ ಘೋರ ಪರಿಣಾಮ ಎಂದರೆ ಸುಮಾರು ೧/೩ರಷ್ಟು ಅತಿಥಿ ಹಾಗೂ ಖಾಸಗಿ ಉಪನ್ಯಾಸ­ಕರು ತಕ್ಷಣ ತಮ್ಮ ಕೆಲಸ ಕಳೆದುಕೊಳ್ಳುತ್ತಾರೆ. ಈ ವೃತ್ತಿಯನ್ನೇ ನಂಬಿ­ಕೊಂಡಿರುವ ೧೦ ಸಾವಿರಕ್ಕೂ ಹೆಚ್ಚಿನ ಉಪನ್ಯಾ­ಸಕರು ಬೀದಿಪಾಲಾಗುತ್ತಾರೆ. ಈ ಸಂಖ್ಯೆ ಕೇವಲ ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಿಗೆ ಸೀಮಿತ. ಖಾಸಗಿ ಕಾಲೇಜು­ಗಳಲ್ಲಿ ಅದೆಷ್ಟು ಜನ ಕೆಲಸ ಕಳೆದು­ಕೊಳ್ಳು­­ತ್ತಾರೊ? ಇದೇ ಉದ್ದೇಶ ಸರ್ಕಾರ­ದ್ದಾಗಿ­ದ್ದರೆ ಇದಕ್ಕಿಂತ ಘೋರ ಸಾಮಾಜಿಕ ದುರಂತ ಮತ್ತೊಂದಿಲ್ಲ.

ಶಿಕ್ಷಣ ತಜ್ಞರ ಸಲಹೆಯಂತೆ ಕಾರ್ಯಭಾರ­ವನ್ನು ರಾಷ್ಟ್ರೀಯ ಮಟ್ಟದಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ), ಕಾಲ­ಕಾಲಕ್ಕೆ ನಿರ್ದಿಷ್ಟಪಡಿಸಿ ನಿಯಮಾವಳಿ­ಗಳನ್ನು ರೂಪಿಸುತ್ತಾ ಬಂದಿದೆ. ೨೦೧೦ರ ಪರಿಷ್ಕೃತ ಯುಜಿಸಿ ನಿಯಮಾವಳಿಯಂತೆ ವಿಶ್ವವಿದ್ಯಾಲಯ ಹಾಗೂ ಕಾಲೇಜು ಅಧ್ಯಾಪಕರಿಗೆ ತರಗತಿಗಳಲ್ಲಿ ನೇರವಾಗಿ ಬೋಧಿಸುವ ಅವಧಿಯನ್ನು ಸಹಾ­ಯಕ ಪ್ರಾಧ್ಯಾಪಕರಿಗೆ ೧೬ ಗಂಟೆ, ಪ್ರಾಧ್ಯಾಪಕರು ಮತ್ತು ಸಹಪ್ರಾಧ್ಯಾಪಕರಿಗೆ ೧೪ ಗಂಟೆ (ಸಂಶೋ­ಧನಾ ಮಾರ್ಗದರ್ಶನ ಮಾಡುತ್ತಿದ್ದಲ್ಲಿ ೨ ಗಂಟೆ­ಗಳ ರಿಯಾಯಿತಿ) ನಿಗದಿ ಮಾಡಿದೆ.

ಆದರೆ ಕಾರ್ಯಭಾರ ಇಷ್ಟಕ್ಕೇ ಸೀಮಿತ­ವಾ­ಗಿಲ್ಲ. ಈ ಬಗ್ಗೆ ೧೯೯೬ರಲ್ಲಿಯೇ ಯುಜಿಸಿ ನಿಯ­ಮಾವಳಿ ರೂಪಿಸಿದೆ. ಅದರ ಪ್ರಕಾರ ವಾರ­ದಲ್ಲಿ ೪೦ ಗಂಟೆಗಳ ಕಾರ್ಯ ನಿರ್ವಹಣೆ­ಯನ್ನು ಪ್ರತಿ­ಯೊಬ್ಬ ಉಪನ್ಯಾಸಕ ಅನುಸರಿಸ­ಬೇಕು. ಒಂದು ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ೧೮೦ ದಿವಸಗಳು ಕಾರ್ಯ ನಿರ್ವಹಿಸಿರಬೇಕು. ಕಳೆದ ಸುಮಾರು ೨೦ ವರ್ಷಗಳಿಂದ ಈ ಕಾರ್ಯಭಾರವನ್ನು ಸರ್ಕಾರ ಹಾಗೂ ಉಪನ್ಯಾ­ಸ­ಕರು ಒಪ್ಪಿದ್ದು ಸರ್ಕಾರದ ನೇಮಕಾತಿಗಳು ಇದೇ ಕಾರ್ಯಭಾರದ ಆಧಾರದ ಮೇಲೆ ನಡೆದಿವೆ.

೨೦೦೯ರ ಯುಜಿಸಿ ಪರಿಷ್ಕೃತ ವೇತನ ಆದೇಶ­ದಲ್ಲಿ ಸಹಪ್ರಾಧ್ಯಾಪಕರಿಗೆ ೧೪ ಗಂಟೆಗಳ ಬೋಧನಾ ಅವಧಿ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರೂ ಅದನ್ನು ದೊಡ್ಡ ವಿಷಯ­ವನ್ನಾಗಿ ಮಾಡದೇ ೧೬–೨೦ ಗಂಟೆಗಳ ಬೋಧನಾ ಕರ್ತವ್ಯವನ್ನು ನಿರ್ವಹಿಸುತ್ತಾ ಬಂದಿ-­ದ್ದಾರೆ (ರಾಜ್ಯದಲ್ಲಿ ೪,೦೦೦ ಸಹ ಪ್ರಾಧ್ಯಾಪಕ­ರಿದ್ದಾರೆ). ಅನುದಾನರಹಿತ ಕಾಲೇಜುಗಳೂ ಇದೇ ಮಾನದಂಡದ ಮೇಲೆ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳುತ್ತಿವೆ.

ಖಾಸಗಿ ಕಾಲೇ­ಜು­ಗಳಲ್ಲಿ ಹೆಚ್ಚುವರಿಯಾಗಿ ಮೌಲ್ಯ–ನೀತಿ ಶಿಕ್ಷಣ ಹಾಗೂ ಸುಪ್ರೀಂಕೋರ್ಟ್‌ ಕಡ್ಡಾಯ­ಗೊಳಿಸಿರುವ ವಿಷಯ­ಗಳಾದ ಸಂವಿಧಾನ, ಮಾನವ ಹಕ್ಕುಗಳು, ಲಿಂಗ ಸಮಾನತೆ ಇಂತಹ ವಿಷಯಗಳ ಬಗ್ಗೆ ಕನಿಷ್ಠ ೨ ಗಂಟೆಗಳ ನೇರ ಬೋಧನೆ ನಡೆಸಲೇಬೇಕಾಗು-­ತ್ತದೆ. ಅಂದರೆ ವಾಸ್ತವಿಕವಾಗಿ ಶಿಕ್ಷಕರು ೧೬–-೨೦ಕ್ಕೆ ಬದಲಾಗಿ ೧೮–೨೨ ಗಂಟೆಗಳ ಬೋಧನಾ ಕೆಲಸ ನಿರ್ವಹಿಸುತ್ತಿದ್ದಾರೆ. ಇಂದು ನಾವು ಗುಣಮಟ್ಟದ ಶಿಕ್ಷಣದ ಬಗ್ಗೆ ಮಾತನಾಡುತ್ತಿದ್ದೇವೆ. ಕಲಿಸುವಿಕೆ ಹಾಗೂ ಕಲಿ­ಯುವಿಕೆ ಎರಡೂ ವಿಧಾನಗಳಲ್ಲಿ ಅನೇಕ ಬದ­ಲಾ­ವಣೆಗಳಾಗಿವೆ. ಗುಣಮಟ್ಟ ಹೆಚ್ಚಿಸುವ ಪ್ರಕ್ರಿ­ಯೆ­ಗಳಲ್ಲಿ ‘ನ್ಯಾಕ್’ ಸಂಸ್ಥೆಯಿಂದ ನಡೆಯುವ ಮೌಲ್ಯ­ಮಾಪನವನ್ನು ಕಡ್ಡಾಯಗೊಳಿಸ­ಲಾಗಿದೆ.

ಮಾಹಿತಿ ತಂತ್ರಜ್ಞಾನ, ಕೈಗಾರಿಕೋದ್ಯಮ ಮತ್ತು ಅಂತರರಾಷ್ಟ್ರೀಯ ಆವಿಷ್ಕಾರ -ಅವ­ಶ್ಯಕತೆ­ಗಳಿಗೆ ತಕ್ಕಂತೆ ಕಲಿಕೆ-–ಕಲಿಸುವಿಕೆ ಬದಲಾಗುವುದು ಅನಿವಾರ್ಯ. ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕಲಿ­ಸು­ವುದು, -ಕಲಿಕೆ, -ಪರೀಕ್ಷಾ ವ್ಯವಸ್ಥೆ,- ಮೂಲ ಸೌಕ­ರ್ಯ­ಗಳು,- ಸಂಶೋಧನೆ, ಭಾಷಾ ಪ್ರಾವೀಣ್ಯ, ಉದ್ಯೋಗ ಆಧಾರಿತ ಕೌಶಲಗಳು, -ಶೈಕ್ಷಣಿಕ ಪೂರಕ ಚಟುವಟಿಕೆಗಳು-, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳು-, ಸಾಮಾಜಿಕ ಜವಾ­ಬ್ದಾರಿ,- ವಿದ್ಯಾರ್ಥಿ ಸಾಧನೆಗಳು,- ಉದ್ಯೋ­ಗಾವ­ಕಾಶ ಕಲ್ಪಿಸುವುದು-, ಆಡಳಿತಾತ್ಮಕ ಬದಲಾ­ವಣೆ­ಗಳು ಹೀಗೆ ಹತ್ತು ಹಲವು ರೀತಿಯಲ್ಲಿ ಉನ್ನತ ಶಿಕ್ಷಣ ಹೊಸ ರೂಪ, ಸ್ವರೂಪ ಪಡೆದು­ಕೊಂಡಿದೆ.

ಶಿಕ್ಷಕರನ್ನು ತರಗತಿಗಳಲ್ಲಿ ಬೋಧ­ನೆಗೆ ಸೀಮಿತ­ಗೊಳಿ­ಸಲು ಸಾಧ್ಯವಿಲ್ಲ. ಅವರದು ಬಹುಮುಖಿ ಪಾತ್ರ. ಜೊತೆಗೆ ಸಂಶೋಧನೆ ಆಧಾರಿತ ಕಲಿಸು­ವಿಕೆ ಇಂದಿನ ಅಗತ್ಯ. ಹಾಗಾಗಿ ಶಿಕ್ಷಕರಿಗೆ ಸಂಶೋ­ಧನಾ ಪ್ರಬಂಧಗಳನ್ನು ಮಂಡಿ­ಸುವುದು, ಪ್ರಕಟಿಸು­ವುದು ಅನಿವಾರ್ಯ. ವಾರದಲ್ಲಿ ವಿರಾಮಗಳನ್ನು ಹೊರತುಪಡಿಸಿ ಲಭ್ಯವಿರುವ ೨೮–-೩೦ ಗಂಟೆಗಳಲ್ಲಿ ೨೨–-೨೬ ಗಂಟೆಗಳನ್ನು ತರಗತಿಗಳಲ್ಲಿ ಕಳೆದರೆ ವಿದ್ಯಾ­ರ್ಥಿ­ಗಳಿಗೆ ಏನು ಪ್ರಯೋಜನ? ವಿದ್ಯಾರ್ಥಿಗಳು ಯಾವ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯ, ಯಾವಾಗ ಗ್ರಂಥಾಲಯಕ್ಕೆ ಹೋಗು­ತ್ತಾರೆ, ಕ್ರೀಡಾ ಮೈದಾನವನ್ನು ಯಾವಾಗ ನೋಡಲು ಸಾಧ್ಯ? ಆರ್ಥಿಕ ಉಳಿತಾಯದ ದೃಷ್ಟಿ­ಯಿಂದ ಏಕಮುಖವಾಗಿ ಸಾಗುತ್ತಿರುವವರಿಗೆ ಇದ­ನ್ನೆಲ್ಲಾ ಹೇಗೆ ಅರ್ಥಮಾಡಿಸುವುದು? ವಿದ್ಯಾ­ರ್ಥಿ­ಗಳು ತರಗತಿಗಳ ಒಳಗೆ ಕಲಿಯುವು­ದ­ಕ್ಕಿಂತ ಹೊರಗೆ ಕಲಿಯುವುದು ಹೆಚ್ಚು ಎನ್ನುವ ಮಾತಿದೆ.

ಕಲಿಯುವುದು-, ಕಲಿತದ್ದನ್ನು ಬದಲಾ­ಯಿ-­­ಸುವುದು ಮತ್ತು ಹೊಸಕಲಿಕೆ ಉನ್ನತ ಶಿಕ್ಷಣದ ಧ್ಯೇಯೋ­ದ್ದೇಶಗಳಲ್ಲಿ ಸೇರಿವೆ.
ಬೋಧನೆಯನ್ನು ಭೌತಿಕ ಮಾನದಂಡದಿಂದ ಅಳೆಯಲು ಸಾಧ್ಯವಿಲ್ಲ. ಅದೊಂದು ಬೌದ್ಧಿಕ ಪ್ರಕ್ರಿಯೆ. ಪ್ರತೀ ತರಗತಿಗೂ ವಿಷಯಾಧಾರಿತ ತಯಾರಿ ಬೇಕೇಬೇಕು. ಎಲ್ಲಾ ವಿದ್ಯಾರ್ಥಿ­ಗ­ಳಲ್ಲೂ ಸಮನಾದ ಕಲಿಯುವ ಆಸಕ್ತಿ ಕೂಡಾ ಇರುವು­ದಿಲ್ಲ. ಶಿಕ್ಷಕನಿಗೆ ಅತೀ ಪ್ರಯಾಸದ ಕೆಲಸ ಎಂದರೆ ಕಲಿಕೆ ವಾತಾವರಣ ನಿರ್ಮಿಸುವುದು. ೧೭–-೨೦ರ ಹರೆಯದ ಯುವಕರನ್ನು ಒಂದು ಶಿಸ್ತಿನ ಪರಿಧಿಗೆ ಒಳಪಡಿಸುವುದು ಸುಲಭದ ಮಾತಲ್ಲ. ಶಿಸ್ತು ಮೂಡಿಸುವುದೇ ಒಂದು ದೊಡ್ಡ ಸವಾಲು.

ಅದ­ರಲ್ಲೂ ಹಲವು ತರಗತಿ­ಗಳಲ್ಲಿ ೧೦೦-–೧೨೫ ವಿದ್ಯಾ­ರ್ಥಿಗಳನ್ನು ನಿಭಾ­ಯಿಸಿ ತರಗತಿಗಳಿಂದ ಹೊರಬರುವ ಶಿಕ್ಷಕನ ಮಾನ­ಸಿಕ ಸ್ಥಿತಿಗೆ ಸ್ವಲ್ಪವಾದರೂ ಕನಿಕರ ತೋರಬೇಕು. ರಾಜ್ಯದಲ್ಲಿ ಅನುದಾನಿತ ಕಾಲೇಜುಗಳು ನೀಡಿರುವ ಸೇವೆಯನ್ನು ಸರ್ಕಾರ ಮರೆಯುತ್ತಿದೆ. ೪೫೦ಕ್ಕೂ ಹೆಚ್ಚಿನ ಸರ್ಕಾರಿ ಕಾಲೇಜುಗಳನ್ನು ಏಕಾಏಕಿಯಾಗಿ ಪ್ರಾರಂಭಿಸುವ ಮೊದಲು ಸರ್ಕಾರ ತನ್ನ ಧಾರಣಾ ಶಕ್ತಿಯನ್ನು ವಿಮರ್ಶಿಸ­ಬೇಕಿತ್ತು. ಈಗ ಮೂಲ ಸೌಕರ್ಯಗಳು, ಅಗತ್ಯ­ವಿರುವ ಶಿಕ್ಷಕರನ್ನು ನೇಮಿಸುವ ಜವಾ­ಬ್ದಾರಿ ಎದು­ರಾದಾಗ ಅದರ ಅಗಾಧತೆ ಸರ್ಕಾರಕ್ಕೆ ದಿಗಿಲು ಉಂಟು ಮಾಡುತ್ತಿದೆ.

ಸುಲಭದ ಉಪಾಯ ಎಂದರೆ ಕಾಗದದ ಲೆಕ್ಕಾಚಾರ ಹಾಕಿ ಅವಾಸ್ತವಿ­ಕವಾಗಿ, ಅವೈಜ್ಞಾನಿಕವಾಗಿ ಕಾರ್ಯ­ಭಾರವನ್ನು ಶೇ ೩೩ರಷ್ಟು ಹೆಚ್ಚಿಸು­ವುದು! ಹೆಚ್ಚುವರಿ ಶಿಕ್ಷಕರು ಎನ್ನುವ ಹೆಸರಿನಲ್ಲಿ ಖಾಸಗಿ ಅನುದಾನಿತ ಕಾಲೇ­ಜುಗಳ ಉಪನ್ಯಾಸಕರ ಸೇವೆ­ಯನ್ನು ಸರ್ಕಾರಿ ಕಾಲೇಜುಗಳಿಗೆ ಉಪ­ಯೋ­ಗಿ­ಸು­ವುದು. ಇದೇ ಸರ್ಕಾರದ ನೀತಿಯಾಗಿದ್ದರೆ ಅದು ಶೈಕ್ಷಣಿಕ ನೀತಿ ಅಲ್ಲ, ಆರ್ಥಿಕ ಮಿತವ್ಯಯ ನೀತಿ ಮಾತ್ರ

ಡಾ.ಎ.ಎಂ. ನರಹರಿ
ಮಂಗಳೂರು
Courtesy: Prajavani, November, 18, 2014

Copyright © 2013 amuct.org. All Rights Reserved | Powered by eCreators
Home | News | Sitemap | Contact

Contact Us

OFFICE:
AMUCT, I Floor, Nithyananda Complex,
A.S.R.P. Road,
Near Nava Bharath Circle,
Kodialbail, Mangalore- 575 003

 

E-Mail: This email address is being protected from spambots. You need JavaScript enabled to view it.
E-Mail: This email address is being protected from spambots. You need JavaScript enabled to view it.