ವಿಶ್ವವಿದ್ಯಾಲಯ ಧನಸಹಾಯ ಆಯೋ­ಗದ (ಯು.ಜಿ.ಸಿ.) 2009ರ ನಿಯಮಾ­ನು­ಸಾರ ಪ್ರಥಮದರ್ಜೆ ಕಾಲೇಜಿನ ಸಹ­ಪ್ರಾಧ್ಯಾ­ಪಕರು 14 ಗಂಟೆ ಮತ್ತು ಸಹಾಯಕ ಪ್ರಾಧ್ಯಾ­ಪಕರು 16 ಗಂಟೆ ಬೋಧನೆ ಮಾಡಬೇಕಾಗಿದೆ; ವಿಜ್ಞಾನ ವಿಷಯಗಳವರು ಪ್ರಯೋಗ ಶಾಲೆ­ಗಾಗಿ ಹೆಚ್ಚುವರಿ ಅಂದರೆ ಕ್ರಮವಾಗಿ 6 ಮತ್ತು 4 ಗಂಟೆ ವಿನಿಯೋಗಿಸಬೇಕಾಗಿದೆ. ನಮ್ಮ ರಾಜ್ಯ ಸರ್ಕಾ­ರವು ಈ ಬೋಧನಾವಧಿಯನ್ನು ತಲಾ 6 ಗಂಟೆ ಹೆಚ್ಚಿಸಿ ಸುತ್ತೋಲೆ ಹೊರಡಿಸಿತ್ತು. ಇದಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ಸರ್ಕಾರ ಸದ್ಯಕ್ಕೆ ಇದನ್ನು ತಡೆಹಿಡಿದಿದೆ. ಬೋಧನಾವಧಿಯನ್ನು ಕುರಿತ ಸರ್ಕಾರಿ ದೃಷ್ಟಿಕೋನದ ಬೇರುಗಳಿರು­ವುದು ಜಾಗತೀಕರಣದ ಆರ್ಥಿಕ ನೀತಿಯಲ್ಲಿ ಎಂಬ ಅಂಶ ನನಗೆ ಮುಖ್ಯವೆನಿಸುತ್ತದೆ. ಇದು ಕೇವಲ ಬೋಧನಾವಧಿಯ ಹೆಚ್ಚಳದ ಪ್ರಶ್ನೆ­ಯಲ್ಲ. ‘ಅನುತ್ಪಾದಕ’ ಎಂದು ಭಾವಿಸಲಾದ ಮುಕ್ತ ಆರ್ಥಿಕ ನೀತಿಯ ಮಾರುಕಟ್ಟೆ ಮನೋಧರ್ಮದ ಪ್ರಶ್ನೆ.

ನಿಜ; ಯು.ಜಿ.ಸಿ. ವೇತನ ಪಡೆಯುತ್ತಿರುವ ಎಲ್ಲ ಅಧ್ಯಾಪಕರೂ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಿಲ್ಲ, ನಮ್ಮಲ್ಲಿ ವಿಜೃಂಭಿಸು­ತ್ತಿ­ರುವ ಸಾಮಾಜಿಕ– ಆರ್ಥಿಕ ಕೆಡುಕುಗಳಿಗೆ ಒಂದಷ್ಟು ಅಧ್ಯಾಪಕರು ಬಲಿಯಾಗಿದ್ದಾರೆ. ಈ ಕಾರಣದಿಂದ ಕರ್ತವ್ಯಬದ್ಧರನ್ನು ಮರೆಯ­ಬಾರದು. ಸರ್ಕಾರದ ಈ ಸುತ್ತೋಲೆಯ ಹಿಂದಿದ್ದ ಲೆಕ್ಕಾಚಾರ, ಅಂತಿಮವಾಗಿ ತನ್ನ ಆರ್ಥಿಕ ಹೊರೆ­ಯನ್ನು ಕಡಿಮೆ ಮಾಡಿಕೊಂಡು, ವಿಶ್ವಬ್ಯಾಂಕ್‌ನ ಸಬ್ಸಿಡಿ ವಿರೋಧಿ ನೀತಿಗನುಗುಣ­ವಾದ ಒಂದು ಹೆಜ್ಜೆ­. ಇದರ ಫಲವಾಗಿ ಅನು­ದಾನಿತ ಕಾಲೇ­ಜಿನಲ್ಲಿ ಕಡಿಮೆ ಕೆಲಸ ಮಾಡ­ಬೇಕಾದ­ವರು ಎರಡು­–ಮೂರು ಕಾಲೇಜು­ಗಳಲ್ಲಿ ಕೆಲಸ ಮಾಡ­ಬೇಕಾಗುತ್ತಿತ್ತು. ಅನುದಾನ­ರಹಿತ ಕಾಲೇ­ಜಿ­ನವರು ಕೆಲವರನ್ನು ಮುಲಾಜಿ­ಲ್ಲದೆ ಮನೆಗೆ ಕಳಿ­ಸುವ ಸಾಧ್ಯತೆ ಇತ್ತು. ಸರ್ಕಾರಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ 11 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಲ್ಲಿ ಅನೇಕರು ಬೀದಿ­ಪಾಲಾ­ಗು­ತ್ತಿದ್ದರು. ಇಷ್ಟು ವರ್ಷ­ಗಳ ಕಾಲ ಉನ್ನತ ಶಿಕ್ಷ­ಣದ ಉನ್ನತಿ ಕುರಿತು ಸಮಗ್ರ ಚಿಂತನೆ ಮಾಡದ ಮತ್ತು ಸಕಾಲಿಕ ನೇಮಕಾತಿ ನಡೆಸದ ಸರ್ಕಾರದ ‘ನೀತಿ’ಯು ಖಾಸಗೀಕ­ರಣಕ್ಕೆ ಪೂರಕವಾಗಿ ಕೆಲಸ ಮಾಡಿದೆ. ಈಗ ನೋಡಿ, ಸ್ವಾಯತ್ತ ಕಾಲೇಜು­ಗಳಿವೆ. ಖಾಸಗಿ ವಿಶ್ವವಿದ್ಯಾಲಯಗಳಿವೆ; ಇವುಗಳ ಪಠ್ಯ­ಕ್ರಮ, ಪರೀಕ್ಷೆ, ನೇಮಕಾತಿ, ಶುಲ್ಕ ಯಾವುದ­ರಲ್ಲೂ ಸರ್ಕಾರಿ ವಿಶ್ವವಿದ್ಯಾಲಯವು ತಲೆ ಹಾಕು­ವಂತಿಲ್ಲ. ಕಡೆಯಲ್ಲಿ ಅಂಕಪಟ್ಟಿಯನ್ನು ಮಾತ್ರ ಕೊಡ­ಬೇಕು. ಮೀಸಲಾತಿಯಂತಹ ಸಂವಿಧಾನಾ­ತ್ಮಕ ಹಕ್ಕುಗಳ ಅನುಷ್ಠಾನಕ್ಕೂ ಒತ್ತಾಯಿಸು­ವಂತಿಲ್ಲ. ಸರ್ಕಾರಿ ಶೈಕ್ಷಣಿಕ ವಲಯವನ್ನು ಮೂಲೆ­ಗುಂಪು ಮಾಡುವ ಈ ‘ರಾಷ್ಟ್ರೀಯ ನೀತಿ’ಯು ಜಾಗತೀಕರಣದ ಫಲ; ಶೈಕ್ಷಣಿಕ ಅಸಮಾನತೆಯ ಆಡುಂಬೊಲ.

ಪಿ.ವಿ.ನರಸಿಂಹ ರಾವ್‌ ಅವರು ಪ್ರಧಾನಿ­ಯಾಗಿ­ದ್ದಾಗ ಅಂದಿನ ಅರ್ಥ ಸಚಿವರಾಗಿದ್ದ ಡಾ.ಮನಮೋಹನ್‌ ಸಿಂಗ್‌ ಅವರು ಆರಂಭಿಸಿದ ಉದಾರೀಕರಣದ ಹೆಸರಿನ ಆರ್ಥಿಕ ಸುಧಾರಣೆ­ಗಳು ಈಗ ಮೋದಿಯವರಿಂದ ಆಕ್ರಮಣಶೀಲ­ವಾಗಿ ಅನುಷ್ಠಾನಗೊಳ್ಳುತ್ತಿವೆ. ಆರ್ಥಿಕ ಸುಧಾರ­ಣೆಯ ದೃಷ್ಟಿಕೋನವೇ ಶೈಕ್ಷಣಿಕ ಸುಧಾರಣೆಗೂ ಅನ್ವಯಿಸುವುದರಿಂದ ಉನ್ನತ ಶಿಕ್ಷಣದಲ್ಲಿ ಸರ್ಕಾ­ರದ ಪಾತ್ರವನ್ನು ಕಡಿಮೆ ಮಾಡುವುದೇ ಸುಧಾ­ರಣೆಯೂ ಗುಣಮಟ್ಟವೂ ಅನ್ನಿಸಿಕೊಳ್ಳು­ತ್ತಿದೆ! ಇತ್ತೀಚೆಗೆ ಇನ್ಫೊಸಿಸ್‌ ಸಹಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರು ‘ಉನ್ನತ ಶಿಕ್ಷಣದಲ್ಲಿ ಸರ್ಕಾರವು ಹೆಚ್ಚು ತಲೆ ಹಾಕಬಾರದು’ ಎಂದು ಹೇಳಿದ್ದು ವರದಿ­ಯಾ­ಗಿದೆ. ಅಂದರೆ ಖಾಸಗಿಯವರಿಗೆ ಪೂರ್ತಿ ಬಿಟ್ಟು­ಬಿಡಿ ಎಂದರ್ಥ. ಹಾಗಿದ್ದರೆ ಸಂವಿಧಾನ ಯಾಕೆ, ಪ್ರಜಾಪ್ರಭುತ್ವ ಯಾಕೆ, ಸರ್ಕಾರ ಯಾಕೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ.

ನರಸಿಂಹರಾವ್‌–ಮನಮೋಹನ್‌ ಸಿಂಗ್‌ ಅವ­ರಿಂದ ಆರಂಭವಾದ ಆರ್ಥಿಕ ‘ಉದರೀ­ಕರಣ’ವು ಮುಂದುವರಿದು ವಾಜಪೇಯಿ ನೇತೃತ್ವದ ಸರ್ಕಾ­ರವು ಗ್ಯಾಟ್ ಒಪ್ಪಂದಕ್ಕೆ ಸಹಿ ಮಾಡಿತು. ಗ್ಯಾಟ್ ಒಪ್ಪಂದವು ಶಿಕ್ಷಣದ ಬಗ್ಗೆ ಬಳಸಿರುವ ಪರಿ­ಭಾಷೆಯನ್ನು ಗಮನಿಸಿ: ಶಿಕ್ಷಣವನ್ನು Knowledge Industry ಎನ್ನ­ಲಾಗಿದೆ. ಅಧ್ಯಾಪಕರು Knowledge industry workers; ವಿದ್ಯಾರ್ಥಿ­ಗಳು ‘Knowledge industry clients’. ದೂರ­ಶಿಕ್ಷಣವು ‘Cross border supply’. ವಿದ್ಯಾರ್ಥಿಗಳ ವಿನಿಮಯ ಕಾರ್ಯ ‘Consumption abroad’ ಎಂದೂ ವಿದೇಶಿ ವಿಶ್ವವಿದ್ಯಾಲಯಗಳು ನಮ್ಮ ದೇಶದಲ್ಲಿ ಶಾಖೆಗಳನ್ನು ಆರಂಭಿಸಿದರೆ ‘Commercial presence’ ಎಂದೂ ಕರೆಯಲಾ­ಗಿದೆ. ಗ್ಯಾಟ್ ಒಪ್ಪಂದವು ಶಿಕ್ಷಣಕ್ಕೆ ಬಳಸಿರುವ ಪರಿಭಾಷೆಯು ಉದ್ಯಮಕ್ಕೆ ಸಂಬಂಧಿಸಿದ್ದೇ ಹೊರತು ಶಿಕ್ಷಣಕ್ಕೆ ಸಂಬಂಧಿಸಿದ್ದಲ್ಲ.

ಇನ್ನು ವಿದೇಶಿ ವಿಶ್ವವಿದ್ಯಾಲಯಗಳ ಜೊತೆ ನಮ್ಮ ವಿಶ್ವವಿದ್ಯಾಲಯಗಳು ಮಾಡಿಕೊಂಡ M.O.U.ಗಳ ಶೇಕಡಾ­ವಾರು ಪ್ರಮಾಣವು ಕೆಲವು ವರ್ಷಗಳ ಹಿಂದೆ ಹೀಗಿತ್ತು: ಬಿಸಿನೆಸ್‌ ಮೇನೇಜ್‌ಮೆಂಟ್‌ ಶೇ 60, ಹೋಟೆಲ್‌ ಮೇನೇಜ್‌ಮೆಂಟ್‌ ಶೇ 15, ಆರ್ಕಿ­ಟೆಕ್ಚರ್‌ ಶೇ 10, ಫ್ಯಾಷನ್‌ ಡಿಸೈನಿಂಗ್‌ ಶೇ 10, ಇನ್ನು ಸಾಹಿತ್ಯ, ಚರಿತ್ರೆ, ಸಮಾಜ ವಿಜ್ಞಾನ, ರಾಜಕೀಯಶಾಸ್ತ್ರ ಮುಂತಾದ ಎಲ್ಲ ಮಾನವಿಕ ಜ್ಞಾನ ಶಿಸ್ತುಗಳಿಗೆ ಶೇ 5ರಷ್ಟು ಮಾತ್ರ. ಈ ಶೇಕ­ಡಾ­ವಾರು ಪ್ರಮಾಣವು ಉನ್ನತ ಶಿಕ್ಷಣವು ಸಾಗು­ತ್ತಿರುವ ಹಾದಿ ಮತ್ತು ಅದರ ಹಿಂದೆ ಕೆಲಸ ಮಾಡು­ತ್ತಿರುವ ಉದ್ಯಮ ಪ್ರಧಾನ ನೀತಿಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಈ ಉದ್ಯಮ ಪ್ರಧಾ­ನತೆ ಹೇಗೆ ಕೆಲಸ ಮಾಡುತ್ತಿದೆಯೆಂದರೆ ವಿಶ್ವವಿದ್ಯಾಲಯಗಳ ಗುಣಮಟ್ಟ ನಿರ್ಧಾರಕ್ಕೆ ಸ್ಟಾರ್‌­ಗಳನ್ನು ಕೊಡಲಾಗುತ್ತಿದೆ. ತ್ರೀ ಸ್ಟಾರ್‌, ಫೈವ್‌ ಸ್ಟಾರ್‌ ಮುಂತಾದ ಪರಿಭಾಷೆಯು ಹೋಟೆಲ್ ಉದ್ಯಮಕ್ಕೆ ಸಂಬಂಧಿಸಿದ್ದು ಎಂಬ ಅಂಶವನ್ನಿಲ್ಲಿ ಗಮನಿಸಬೇಕು. ಆರ್ಥಿಕ ಸುಧಾರಣೆಯ ಅಡಿಯಲ್ಲಿ ನಡೆಯುವ ಶೈಕ್ಷಣಿಕ ಸುಧಾರಣೆ­ಯೆಂದರೆ ಉದ್ಯಮೀಕರಣ ಮತ್ತು ಖಾಸಗೀಕರಣ ಎನ್ನು­ವುದು ಈ ಪರಿಭಾಷೆಯಿಂದಲೇ ಸ್ಪಷ್ಟವಾಗು­ತ್ತದೆ.

ಹಾಗೆ ನೋಡಿದರೆ ನಮ್ಮ ದೇಶದ ಉನ್ನತ ಶಿಕ್ಷಣದ ಪ್ರಮಾಣ ತುಂಬಾ ಹೆಚ್ಚೇನೂ ಅಲ್ಲ. ಒಂದು ಮಾಹಿತಿಯ ಪ್ರಕಾರ ಈಗ ಶೇ 18 ರಷ್ಟು ಜನರು ನಮ್ಮಲ್ಲಿ ಉನ್ನತ ಶಿಕ್ಷಣ ಪಡೆ­ಯು­ತ್ತಿದ್ದಾರೆ. ಅಮೆರಿಕದಲ್ಲಿ ಶೇ 81, ಜಪಾನ್‌ನಲ್ಲಿ ಶೇ 86 ಮತ್ತು ಕೆನಡಾ ಪ್ರದೇಶದಲ್ಲಿ ನೂರಕ್ಕೆ ನೂರು ಎಂದು ಒಂದು ಮಾಹಿತಿ. ಒಟ್ಟಾರೆ­ಯಾಗಿ ಹೇಳುವುದಾದರೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಶೇ 51, ಅಭಿವೃದ್ಧಿಶೀಲ ದೇಶಗಳಲ್ಲಿ ಶೇ 21 ಮತ್ತು ಹಿಂದುಳಿದ ದೇಶಗಳಲ್ಲಿ ಶೇ 6.5 ಎಂದು ಹೇಳಲಾಗುತ್ತಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲೂ ಉನ್ನತ ಶಿಕ್ಷಣದ ಪ್ರಮಾಣವು ಸಮಾನತೆಗೆ ಸಮೀಪವಿಲ್ಲ. ಜೊತೆಗೆ, ಒಂದೊಂದು ದೇಶವೂ ಆಯಾ ದೇಶದ ಒಂದೊಂದು ಪ್ರದೇಶವೂ ವಿಭಿನ್ನ ಸಾಮಾಜಿಕತೆ, ಭಾಷಿಕತೆ ಮತ್ತು ಸಾಂಸ್ಕೃತಿಕತೆಯನ್ನು ಹೊಂದಿ­ರು­ತ್ತದೆಯೆಂಬುದನ್ನು ಗಮನಿಸಬೇಕು. ಆದ್ದ­ರಿಂದ ‘ಗುಣಮಟ್ಟದ ಶಿಕ್ಷಣ’ ಎಂಬ ನೆಪದಲ್ಲಿ ಅಮೆರಿಕದ ಮಾದರಿಯನ್ನು ಮಾತ್ರ ಆದರ್ಶ­ವೆಂದು ಭಾವಿಸುವುದೇ ತಪ್ಪು, ಅದೊಂದೇ ಮಾದರಿಯನ್ನು ಭಟ್ಟಿ ಇಳಿಸುವುದು ಇನ್ನೂ ತಪ್ಪು. ಆದರೂ ಮಾರುಕಟ್ಟೆಯ ನೆಲೆಯಲ್ಲಿ, ಬಂಡವಾಳದ ಬಲದಲ್ಲಿ ಜಾಗತೀಕರಣದ ಯಜಮಾನನೆಂದರೆ ಅಮೆರಿಕ. ಹೀಗಾಗಿ ಅಮೆ­ರಿಕದ ಆರ್ಥಿಕ ಯಜಮಾನಿಕೆಯನ್ನು ಒಪ್ಪಿ ಅದರ ಆಣತಿಯಂತೆ ನಡೆದುಕೊಳ್ಳುವ ಆರ್ಥಿಕ ಸುಧಾರಣೆಯು ಶಿಕ್ಷಣ ಕ್ಷೇತ್ರದ ಸುಧಾರಣಾ ಮಾದರಿಗಳನ್ನೂ ನಿರ್ಧರಿಸುತ್ತಿದೆ. ಇದು ಕೆಲವೊಮ್ಮೆ ಪ್ರತ್ಯಕ್ಷವಾಗಿ, ಇನ್ನು ಕೆಲವೊಮ್ಮೆ ಪರೋಕ್ಷವಾಗಿ ಕೆಲಸ ಮಾಡುತ್ತದೆ. ಸಮಾಜದ ಅಸ್ತಿಭಾರವಾಗಿ ಕೆಲಸ ಮಾಡುವ ಆರ್ಥಿಕತೆಯು ಇನ್ನಿತರ ಕ್ಷೇತ್ರಗಳನ್ನು ನಿಯಂತ್ರಿಸುವ ಶಕ್ತಿಯನ್ನು ಪಡೆದಿರುತ್ತದೆ ಮತ್ತು ನಿರ್ದೇಶಿಸುತ್ತದೆ. ಕುಲ­ಮೂಲ ಉತ್ಪಾದನಾ ಪದ್ಧತಿ, ಕೈಗಾರಿಕೀಕರಣದ ಸಾಮೂಹಿಕ ಉತ್ಪಾದನಾ ವ್ಯವಸ್ಥೆ, ಮಿಶ್ರ ಆರ್ಥಿಕ ಪದ್ಧತಿ ಮತ್ತು ಈಗಿನ ಮುಕ್ತ ಆರ್ಥಿಕ ಪದ್ಧತಿಗಳು ನಮ್ಮ ಸಮಾಜದ ವಿವಿಧ ಅಂಗಗಳ ಮೇಲೆ ಬೀರಿದ ಪ್ರಭಾವ ಮತ್ತು ಪರಿಣಾಮ­ಗಳನ್ನು ಪರಿಶೀಲಿಸಿದರೆ ಆರ್ಥಿಕತೆಯ ಆದ್ಯತೆ­ಗಳು ಅರ್ಥವಾಗುತ್ತವೆ.

ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣದಲ್ಲಿ ಖಾಸ­ಗೀಕರಣಕ್ಕೆ ಸಿಗುತ್ತಿರುವ ಆದ್ಯತೆ ಮತ್ತು ವೃತ್ತಿ ಶಿಕ್ಷಣವು ಗಳಿಸಿರುವ ಪ್ರಾಮುಖ್ಯವನ್ನು ಗಮನಿಸ­ಬೇಕು. ಇಂದು, ಗುಣಮಟ್ಟದ್ದೆಂದರೆ ಖಾಸಗಿ ಸಂಸ್ಥೆ­ಗಳ ಶಿಕ್ಷಣ ಮತ್ತು ಮುಖ್ಯ ಶಿಕ್ಷಣವೆಂದರೆ ವೃತ್ತಿಶಿಕ್ಷಣ ಎಂಬ ಸನ್ನಿವೇಶ ನಿರ್ಮಾಣವಾಗಿದೆ. ವಾಣಿಜ್ಯದ ವಿಷಯಗಳಿಗೆ ಬರುತ್ತಿರುವ ಶಿಕ್ಷಣಾ­ರ್ಥಿ­ಗಳಿಗೆ ಲೆಕ್ಕವೇ ಇಲ್ಲ. ಆದರೆ ಮಂಗಳನ ಮೇಲೆ ಉಪಗ್ರಹ ಸ್ಥಾಪಿಸಿದ ನಮ್ಮ ದೇಶದ ಕಾಲೇಜುಗಳಲ್ಲಿ ಮೂಲ ವಿಜ್ಞಾನವನ್ನು ಅಭ್ಯಾಸ ಮಾಡುವವರ ಸಂಖ್ಯೆ ತುಂಬಾ ಕ್ಷೀಣಿಸುತ್ತಿದೆ. ಇನ್ನು ಸಾಹಿತ್ಯಾಭ್ಯಾಸಿಗಳ ವಿಷಯ ಬಿಡಿ; ಅನೇಕ ಕಾಲೇಜುಗಳಲ್ಲಿ ತರಗತಿಗಳನ್ನು ಮುಚ್ಚಲಾಗು­ತ್ತಿದೆ. ಮುಕ್ತ ಮಾರುಕಟ್ಟೆಯ ಏಕಮುಖಿ ಆರ್ಥಿಕ ನೀತಿಯು ಶಿಕ್ಷಣ ಕ್ಷೇತ್ರವನ್ನೂ ಏಕ­ಮುಖಿ­­ಯಾಗಿಸುತ್ತಿದೆ. ಉನ್ನತ ಶಿಕ್ಷಣದಲ್ಲೂ ವೃತ್ತಿ ಶಿಕ್ಷಣಕ್ಕೆ ಪ್ರಾಮುಖ್ಯ, ಸಾಮಾನ್ಯ ಶಿಕ್ಷಣಕ್ಕೆ ನಿರ್ಲಕ್ಷ್ಯ. ಯಾಕೆಂದರೆ ಜಾಗತೀಕರಣದಲ್ಲಿ ಆರ್ಥಿಕ ಸುಧಾರಣೆಗೆ ಅಂದರೆ ಬಂಡವಾಳದ ಲಾಭಾಭಿವೃದ್ಧಿಗೆ ಆದ್ಯತೆ; ಇಲ್ಲಿ ಶಿಕ್ಷಣವು ‘ಜ್ಞಾನೋ­ದ್ಯಮ’. ಗ್ಯಾಟ್‌ ಒಪ್ಪಂದವೇ ಇದನ್ನು ಸ್ಪಷ್ಟಪಡಿಸಿದೆ. ಇದರ ಫಲವಾಗಿ ಶಿಕ್ಷಣ ತಜ್ಞರ ಜಾಗವನ್ನು ಶಿಕ್ಷಣೋದ್ಯಮಿಗಳು ಆಕ್ರಮಿಸಿ ಕೊಂಡಿ­ದ್ದಾರೆ. ಉದ್ಯಮಿಗಳು ಮತ್ತು ಶಿಕ್ಷಣೋ­ದ್ಯಮಿಗಳು ಸೇರಿ ಸರ್ಕಾರದ ಶಿಕ್ಷಣ ನೀತಿಯನ್ನು ನಿಯಂತ್ರಿಸುವಷ್ಟು ಶಕ್ತರಾಗಿದ್ದಾರೆ. ಈ ಶಕ್ತಿ­ಯನ್ನು ತಂದುಕೊಟ್ಟದ್ದು ಜಾಗತೀಕರಣ ಹಾಗೂ ಆರ್ಥಿಕ ಸುಧಾರಣೆಯ ಹೆಸರಿನಲ್ಲಿ ಬಂದ ಮುಕ್ತ ಆರ್ಥಿಕ ನೀತಿ; ಬಂಡವಾಳಶಾಹಿಯ ನಿರ್ಲಜ್ಜ ನಿಯಂತ್ರಣ.

ನನ್ನ ಈ ಮಾತಿನ ಸಮರ್ಥನೆಗಾಗಿ ಚಿಂತಕ Herbert Aptekar ತಮ್ಮ ‘The Nature of Democracy: Freedom and revolution’ ಎಂಬ ಕೃತಿಯಲ್ಲಿ ಮುಕ್ತ ಆರ್ಥಿಕ ಪದ್ಧತಿಯ ನೀತಿ ನಿಯಮ ಕುರಿತಂತೆ ಹೇಳಿರುವ ಅಂಶಗಳನ್ನು ಉಲ್ಲೇಖಿಸುತ್ತೇನೆ. ಅವರ ಪ್ರಕಾರ (1) ಮುಕ್ತ ಆರ್ಥಿಕ ನೀತಿಯಲ್ಲಿ ಸರ್ಕಾರವು ಬಂಡವಾಳ­ಶಾಹಿ­ಯನ್ನು ನಿಯಂತ್ರಿಸಬಾರದು. ಆದರೆ ಬಂಡ­ವಾಳಶಾಹಿಯು ಸರ್ಕಾರವನ್ನು ನಿಯಂತ್ರಿಸ­ಬಹುದು. (2) ಆರ್ಥಿಕ ಅಸಮಾನತೆಯು ಸಮಾಜದ ಸ್ವಾಭಾವಿಕ ಅಂಶ. (3) ಸ್ವಾತಂತ್ರ್ಯ­ವೆನ್ನುವುದು ರಾಜಕೀಯ ವಿಷಯಗಳಿಗೆ ಸಂಬಂಧಿ­ಸಿದ್ದು. ಆರ್ಥಿಕ ವಿಷಯಗಳಿಗಲ್ಲ. ಸಮರ್ಥನೆಗೆ ಇಷ್ಟು ಸಾಕಲ್ಲವೆ? ಈಗ ಅಧ್ಯಾಪಕರು ಅರ್ಥ­ಮಾಡಿಕೊಳ್ಳಬೇಕು: ಬೋಧನೆಯ ಅವಧಿ ಹೆಚ್ಚಳ ಮತ್ತು ವೆಚ್ಚದ ಕಡಿತಗಳ ದೃಷ್ಟಿಕೋನದ ಬೇರು ಇರುವುದು ಜಾಗತೀಕರಣವೆಂಬ ಅಂತಃ­ಕರಣ­ರಹಿತ ಆರ್ಥಿಕ ನೀತಿಯಲ್ಲಿ. ಆದ್ದರಿಂದ ತಮಗೆ ಹೊರೆ ಹೆಚ್ಚಾಯಿತೆಂದು ಬೋಧನಾ­ವಧಿಯ ಏರಿಕೆಯನ್ನು ವಿರೋಧಿಸಿದರೆ ಸಾಲದು. ಈ ಏರಿಕೆಯ ಜೊತೆಗೆ ಅದರ ಬೇರುಗಳಿರುವ ಮುಕ್ತ ಆರ್ಥಿಕ ನೀತಿಯನ್ನೂ ಜ್ಞಾನೋದ್ಯಮದ ಫಲವಾದ ಉನ್ನತ ಶಿಕ್ಷಣ ಪದ್ಧತಿಯ ವಿಕೃತ ಪಲ್ಲಟ­ಗಳನ್ನೂ ವಿರೋಧಿಸುವ ತಾತ್ವಿಕ ತಾಕ­ತ್ತನ್ನು ತೋರಿಸಬೇಕು. ಉನ್ನತ ಶಿಕ್ಷಣ ಪದ್ಧತಿ­ಯಲ್ಲಿ ಮಾನವಿಕ, ಮೂಲ ವಿಜ್ಞಾನ­ಗಳನ್ನು ಕಲಿಯದೆ ವಾಣಿಜ್ಯ ಪ್ರಧಾನ ಪದವಿಗಳಿಲ್ಲ ಎಂಬ ರೀತಿಯಲ್ಲಿ ಪಠ್ಯಕ್ರಮದ ಪುನರ್ರಚನೆಯಾಗ­ಬೇಕು, ಕಲೆ, ವಿಜ್ಞಾನ, ವಾಣಿಜ್ಯ ವಿಷಯಗಳ ಅಂತರ್‌ ಸಂಬಂಧವುಳ್ಳ ಅಧ್ಯಯನ ಸಾಧ್ಯವೇ ಎಂದು ಚರ್ಚಿಸಬೇಕು.

ಒಟ್ಟಾರೆ ಉನ್ನತ ಶಿಕ್ಷ­ಣದ ಉದ್ಯಮ ನೀತಿಯ ವೈಪರೀತ್ಯಕ್ಕೆ ವಿಮೋ­ಚನೆಯಾಗಬೇಕು. ಬೋಧನಾವಧಿ ಏರಿಕೆಯ ವಿರೋಧದ ನೆಪದಲ್ಲಿ ಉನ್ನತ ಶಿಕ್ಷಣದ ವಿಮೋ­ಚನೆಗಾಗಿ ಅಧ್ಯಾಪಕರ ಆಂದೋಲನ ಆರಂಭ­ವಾದರೆ ಅದು ಅರ್ಥ­ಪೂರ್ಣ. ಇಲ್ಲದಿದ್ದರೆ ‘ಆರ್ಥಿಕ ಪೂರ್ಣ!’

 

 

 

Copyright © 2013 amuct.org. All Rights Reserved | Powered by eCreators
Home | News | Sitemap | Contact

Contact Us

OFFICE:
AMUCT, I Floor, Nithyananda Complex,
A.S.R.P. Road,
Near Nava Bharath Circle,
Kodialbail, Mangalore- 575 003

 

E-Mail: This email address is being protected from spambots. You need JavaScript enabled to view it.
E-Mail: This email address is being protected from spambots. You need JavaScript enabled to view it.