ಕಳೆದ ವಿದಾನ ಸಭೆಯ ಚುನಾವಣೆಯ ಸಂದರ್ಭ- ಚುನಾವಣಾ ಕಾರ್ಯ ನಿಮಿತ್ತ ತರಬೇತಿಗಾಗಿ ಸೇರಿದ ಶಿಕ್ಷಕರ ನಡುವೆ ಬಿಸಿ ಬಿಸಿ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತ್ತು. ರಿಟಾಯರ್‌ಮೆಂಟ್ ವಯಸ್ಸು ೫೮ಕ್ಕೆ ಇಳಿಯುತ್ತಂತೆ ಹೌದಾ? ಕೆಲವರಂತೂ ಸರಕಾರಿ ಆದೇಶವನ್ನು ನೋಡಿದವರಂತೆಯೇ ವಾದಿಸುತ್ತದ್ದರು. ಇನ್ನು ಕೆಲವರು ಸುಪ್ರೀಂ ಕೋರ್ಟಿನತ್ತ ಬೆರಳು ತೋರಿಸಿ ‘ಇದು ಅವರ ಕೆಲಸ’ ಎಂಬುದಾಗಿ ಹೇಳಿ, ಕೋರ್ಟ್ ಜೂನ್ ಮೊದಲ ವಾರದಲ್ಲಿ ಆದೇಶ ಹೊರಡಿಸಲಿದೆ, ಈಗ ಇಲೆಕ್ಷನ್‌ಗಾಗಿ ತಡೆ ಹಿಡಿಯಲಾಗಿದೆ ಎಂಬುದಾಗಿಯೂ ವಾದಿಸುತ್ತಿದ್ದರು. ಈ ಸುದ್ದಿ ವಿನಿಮಯ ಅಲ್ಲಿಗೇ ಮುಗಿಯಲಿಲ್ಲ ಮುಂದಿನ ಹಂತ ಸುದ್ದಿ ವಿಶ್ಲೇಷಣೆ- ೫೮ರ ನಂತರ ಈ ವರೆಗೆ ಅಂದರೆ ೬೦ ರ ಹತ್ತಿರ ತಲುಪಿದವರಿಗೆ ಯಾವ ಗತಿ? ಅವರಿಂದ ಕೊಟ್ಟ ಸಂಬಳವನ್ನು ಹಿಂಪಡೆಯಬಹುದೇ ಸರಕಾರ? ಅವರಿಗೆ ೬೦ರ ತನಕ ಮುಂದುವರಿಸಬಹುದೇ?ಇದೇ ತರಹದ ಪ್ರಶ್ನೆಗಳು ನಮ್ಮ ಶಿಕ್ಷಕರ ಬತ್ತಳಿಕೆಯಿಂದ ಒಂದರ ಮೇಲೊಂದು ಸಂಘಟನೆಯ ಹುದ್ದೆದಾರರಿಗೆ ಸಾಕಪ್ಪಾ ಸಾಕು ಎನ್ನುವ ಮಟ್ಟಕ್ಕೆಹೊರಬೀಳುತ್ತಲೇ ಇದ್ದವು. ಇವಕ್ಕೆಲ್ಲಾ ಒಂದು ತೆರೆ ಎಳೆಯಲು ಅಮುಕ್ತ್ ಪದಾಧಿಕಾರಿಗಳು ‘ಇವೆಲ್ಲಾ ಗಾಳಿ ಮಾತುಗಳು ಕಿವಿಗೊಡಬೇಡಿ’ ಎಂಬ ತುರ್ತು ಸಂದೇಶಗಳನ್ನು ರವಾನಿಸಬೇಕಾಯಿತು. ಆದರೂ ಪುನಃ ಅದೇ ಸುದ್ದಿ ಮತ್ತೆ ತಲೆಯೆತ್ತಿದೆ.


ಈ ಬಗೆಯ ಗಾಳಿ ಸುದ್ದಿಗಳು ನಮ್ಮ ‘ಉನ್ನತ ಶಿಕ್ಷಕ’ರಲ್ಲಿ ನಿರಂತರ ಹರಡುತ್ತಲೇ ಇರುತ್ತವೆ. ಯುಜಿಸಿ ಬಾಕಿ ವೇತನದ ಬಗ್ಗೆಯೂ ಇದೇ ಮಾತು- ಸೆಂಟ್ರಲ್ ಗೌರ್‍ಮೆಂಟು ದುಡ್ಡು ರಿಲೀಸ್ ಮಾಡಿತಂತೆ. ಬೆಂಗಳೂರಿಗೆ ನಿನ್ನೆನೇ ತಲುಪಿತಂತೆ. ಸ್ಟೇಟ್ ಗೌರ್‍ಮೆಂಟು ಒಂದು ವಾರದಲ್ಲಿ ಕೊಡ್ತದಂತೆ ಎಂದು ಒಂದು ಗುಂಪು ಹೇಳ್ತಾಹೋದರೆ, ಇನ್ನೊಂದು , ಯುಜಿಸಿ ಎರಿಯರ್‍ಸ್ ಕೊಡಬಹುದಾ? ಕೊಡ್ತಾರಾ? ಎಂಬ ಅಪನಂಬಿಕೆಗಳ ಸುರಿಮಳೆಗಳನ್ನೇ ಸುರಿಯುತ್ತಾಇರುತ್ತದೆ. ಈ ಬಗೆಯ ಅಂತೆ ಕಂತೆಗಳ ಸರಮಾಲೆಗಳಿಗೆ ನಮ್ಮಲ್ಲಿ ಎಂದೂ ಅಭಾವ ತೋರುವುದಿಲ್ಲ. ಆದರೆ ಅಭಾವ ಇರುವುದು ನಾವು ಇಂದು ಗಂಭೀರವಾಗಿ ಉನ್ನತ ಶಿಕ್ಷಣದಲ್ಲಿ ಯಾವುದನ್ನು ಚರ್ಚೆ ಮಾಡಬೇಕು, ಯಾವುದನ್ನು ಪರಿಗಣಿಸಬೇಕು ಹಾಗೂ ಯಾವುದನ್ನು ಹೇಳಬೇಕು ಎನ್ನುವಲ್ಲಿ.


ಬಾರತದಲ್ಲಿ ಉನ್ನತ ಶಿಕ್ಷಣ ಒಂದು ಸಂದಿಗ್ದ ಸ್ಥಿತಿಗೆ ತಲುಪಿದೆ. ಕೇಂದ್ರ ಸರಕಾರವು ಒಂದು ಕಡೆ ಇಡೀ ಉನ್ನತ ಶಿಕ್ಷಣ ವ್ಯವಸ್ಥೆಯನ್ನೇ ಬದಲಾಯಿಸುವ ಕೆಲಸಕ್ಕೆ ಕೈಹಾಕಿದೆ. ಹೊಸ (NCHER BILL) ಬಿಲ್ಲನ್ನು ಪಾರ್ಲಿಮೆಂಟಲ್ಲಿ ತರುವ ಹುನ್ನಾರದಲ್ಲಿದೆ. ಇದು ನಮ್ಮಲ್ಲಿ ಯಾವ ಪರಿಣಾಮ ಬೀರಲಿದೆ? ಈಗಾಗಲೇ ಅಧಿಕಾರಿಶಾಹಿಗಳ ಕೈಯಲ್ಲಿ ನಲುಗುತ್ತಿರುವ ಈ ಶಿಕ್ಷಣ ವ್ಯವಸ್ಥೆ ಮುಂದೆ ಯಾವ ಮಟ್ಟಕ್ಕೆ ಏರಬಹುದು ಅಥವಾ ಇಳಿಯಬಹುದು ಎಂಬ ಚಿಂತನೆ ನಡೆಯಬೇಕಾಗಿದೆ. ಅಮುಕ್ತ್ ಈ ಬಗ್ಗೆ ಕಳೆದ ವಾರ್ಷಿಕ ಸಭೆಯ ಶೈಕ್ಷಣಿಕ ಸಮವೇಶದಲ್ಲಿ ಪೀಠಿಕೆ ಹಾಕಿತ್ತು. ಆದರೆ ಕಾರಣಾಂತರದಿಂದ ಅದು ಮುಂದುವರಿಯಲಿಲ್ಲ. ನಮ್ಮ ಶಿಕ್ಷಕರಲ್ಲಿ ಈ ಬಗ್ಗೆ ಯಾರೊಬ್ಬರೂ ಆ ಸಮಾವೇಶದ ನಂತರ ಮಾತೆತ್ತಲಿಲ್ಲ. ಇವೆಲ್ಲಾ ನಮಗೆ ಸೇರಿದ್ದಲ್ಲವೆಂಬ ಕಲ್ಪನೆಯಿಂದಿರಬಹುದು ಎಂಬುದು ನನ್ನ ಭಾವನೆ.


ಪದವಿ ಶಿಕ್ಷಣ ಇಂದು ಬಹಳ ಗೊಂದಲದಲ್ಲಿದೆ. ದೆಹಲಿಯಂತಹ ಪ್ರತಿಷ್ಟಿತ ವಿಶ್ವವಿದ್ಯಾಲಯಗಳು ಪದವಿ ಶಿಕ್ಷಣವನ್ನು ನಾಲ್ಕು ವರ್ಷದ ಅವಧಿಗೆ ವಿಸ್ತರಿಸಿವೆ. ಆದರೆ ಇದಕ್ಕೆ ಬಹಳಷ್ಟು ವಿರೋದವೂ ಕಂಡು ಬಂದಿದೆ. ಆದರೂ ಆದಾವುದನ್ನೂ ಲೆಕ್ಕಿಸದೆ ಏಕಾಏಕಿಯಾಗಿ ಈ ಸಾಲಿನಿಂದ ಹೊಸ ವ್ಯವಸ್ಥೆಜಾರಿಯಾಗಲಿದೆ. ದೆಹಲಿಯಲ್ಲಿ ಪ್ರಾರಂಭವಾದದ್ದು ಮುಂದೊಂದು ದಿನ ನಮಗೂ ಬರಲಾರದೇ? ನಾವು ಈ ವ್ಯವಸ್ಥೆಗೆ ಎಷ್ಟರಮಟ್ಟಿಗೆ ತಯಾರಾಗಿದ್ದೇವೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಸರಕಾರದ ನಿಯಂತ್ರಣವಿಲ್ಲ ಅಥವಾ ನಿಯಂತ್ರಣ ಮಾಡಲು ಮನಸ್ಸಿಲ್ಲ. ಖಾಸಗೀಕರಣದಿಂದಾಗಿ ಉನ್ನತ ಶಿಕ್ಷಣ ದುಬಾರಿಯಾಗುತ್ತಿದೆ. ಈವಾಗಲೇ ನಮ್ಮಲ್ಲಿ ಸಾಂಪ್ರದಾಯಿಕ ಪದವಿ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಾಇದೆ. ಈ ಎಲ್ಲದರ ಬಗ್ಗೆ ನಾವು ಗಂಭೀರ ಚಿಂತನೆ ಮಾಡುವ ಅಗತ್ಯವಿದೆ. ಅಮುಕ್ತ್ ಈ ಬಗ್ಗೆ ರಾಷ್ಟ್ರೀಯ ದೈನಿಕಗಳಲ್ಲಿನ ವರದಿ/ಲೇಖನಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.


ನಾವೆಲ್ಲರೂ‘safe zone’ನಲ್ಲಿ ಇದ್ದೇವೆಂಬ ಭ್ರಮೆ ಬೇಡ. ನಮ್ಮನ್ನು ಭೂತಕನ್ನಡಿ ಹಿಡಿದು ಅಡಿಗಡಿಗೆ ಅಳೆಯುವ ಸಮಾಜ ನಮ್ಮ ಮುಂದಿದೆ. ಸರಕಾರದಿಂದ Fat Salary  ತಿನ್ನುವ ಇವರು ಸಮಾಜಕ್ಕೆ ಏನು ಕೊಡುಗೆ ಕೊಡುತ್ತಿದ್ದಾರೆ ಎಂದು ಕೆಂಗಣ್ಣುಮಾಡಿ ನಮ್ಮನ್ನು ದುರುಗುಟ್ಟುವವರಿದ್ದಾರೆ. ಬರೇ ಪಾಠ ಪ್ರವಚನಗಳು, ದಿನಚರಿ ಬರೆಯುವುದು ಹಾಗೂ ಪ್ರಾಂಶುಪಾಲರಿಗೆ ದಿನಕ್ಕೆರಡು ಬಾರಿ ಸಲಾಂ ಹೊಡೆಯುವುದರಲ್ಲಿ ನಮ್ಮ ಹೊಣೆಗಾರಿಕೆ ಮುಗಿಯುವುದಿಲ್ಲ. ನಮ್ಮ ನಿರ್ಲಕ್ಷ, ನಿರ್ಲಿಪ್ತತೆಗೆ ಮುಂದೊಂದು ದಿನ ನಾವು ಬೆಲೆ ತೆರಬೇಕಾದೀತು. ಈಗಲೇ ಅಧಿಕಾರಿಶಾಹಿಗೆ, ರಾಜಕಾರಣಿಗಳಿಗೆ ನಮ್ಮನ್ನು ಕಂಡರಾಗದು. ನಾವು ‘ಕೆಲಸ ಮಾಡುವುದಿಲ್ಲ’ ಬರೇ ನಮ್ಮ ಹಕ್ಕುಗಳಿಗಾಗಿ ಹೋರಾಡುವವರು ಎಂಬ ಅಪವಾದವಿದೆ. ಇದು ಪೂರ್ತಿ ಸರಿಯಲ್ಲದಿದ್ದರೂ ಎಲ್ಲೋ ಒಂದು ಕಡೆ ‘ಹೌದಲ್ಲಾ’ ಎಂದು ಅನಿಸುತ್ತದೆ.


ಸ್ವತಂತ್ರ ಭಾರತದ ಆರಂಭದ ದಿನಗಳಲ್ಲಿ ಈ ದೇಶದ ನೀತಿ ನಿಯಮಗಳನ್ನು ರೂಪಿಸುವಾಗ ಸರಕಾರವು ಬಹಳಷ್ಟು ಕಾಲೇಜು/ ವಿಶ್ವವಿದ್ಯಾಲಯದ ಶಿಕ್ಷಕರ ನೆರವು ಪಡೆದಿತ್ತು. ನಮಗೆ intellectuals ಎಂಬ ಹಣೆಪಟ್ಟಿಯಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ನಾವು ಅದನ್ನು ಕಳಕೊಳ್ಳುತ್ತಿದ್ದೇವೆ. ಅದನ್ನು ನಾವು ಪುನಃ ಗಳಿಸಬೇಕಾಗಿದೆ ಹಾಗೂ ಆ ದಿಕ್ಕಿನಲ್ಲಿ ಕೆಲಸ ಮಾಡಬೇಕಾಗಿದೆ. ಆಗಲೇ ನಾವು ನಮ್ಮ ಹಕ್ಕುಗಳಿಗಾಗಿ ಧೈರ್‍ಯವಾಗಿ ಹೋರಾಡಬಹುದು.

 

Copyright © 2013 amuct.org. All Rights Reserved | Powered by eCreators
Home | News | Sitemap | Contact

OFFICE:
AMUCT, I Floor, Nithyananda Complex,
A.S.R.P. Road,
Near Nava Bharath Circle,
Kodialbail, Mangalore- 575 003

 

E-Mail: This email address is being protected from spambots. You need JavaScript enabled to view it.
E-Mail: This email address is being protected from spambots. You need JavaScript enabled to view it.